July 26, 2020

ಮೈಸೂರು ಮೃಗಾಲಯದ ಯೋಗʻಬ್ರಹ್ಮʼನ ಬಗ್ಗೆ ನಿಮಗೆಷ್ಟು ಗೊತ್ತು..?

Share This

ಬ್ರಹ್ಮ ಸೃಷ್ಟಿಕರ್ತ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ.. ನಮ್ಮ ಮೈಸೂರಿನ ಮೃಗಾಲಯದಲ್ಲೂ ಒಬ್ಬ ಬ್ರಹ್ಮ ಇದ್ದ.. ಆತನೂ ಕೂಡಾ ಸೃಷ್ಟಿಕರ್ತನೇ.. ಯಾಕಂದ್ರೆ ಬ್ರಹ್ಮ ಕಾಲಿಟ್ಟಾದ ಮೇಲೆಯೇ ಇಲ್ಲಿ ಆತನ ಜಾತಿಯ ಸಂತತಿ ಬೆಳೆಯೋಕೆ ಶುರು ಮಾಡಿದ್ದು.. ಒಂದು ಪರಿವಾರವೇ ಸೃಷ್ಟಿಯಾಗಿದ್ದು.. ಇದು ಬ್ರಹ್ಮ ಹೆಸರಿನ ಹುಲಿಯ ಕತೆ.. ೨೦೨೦ರ ಜುಲೈ ೨೩ನೇ ತಾರೀಖು ಬ್ರಹ್ಮ ಈ ಲೋಕ ಬಿಟ್ಟುಹೋಗಿದ್ದಾನೆ.. ವಯೋಸಹಜ ಸಾವನ್ನಪ್ಪಿದ್ದಾನೆ.. ಪ್ರಪಂಚಕ್ಕೇ ಯೋಗದ ಮಹತ್ವ ತಿಳಿಸಿಕೊಟ್ಟ ಯೋಗಗುರುವಿನ ಆಶಿರ್ವಾದ ಇದ್ದ ಕಾರಣಕ್ಕೋ ಏನೋ ಹೆಚ್ಚು ಕಾಲ ಬದುಕಿ ಇತಿಹಾಸ ಸೃಷ್ಟಿಸಿ ಹೋಗಿದ್ದಾನೆ.. ಸಾಮಾನ್ಯವಾಗಿ ಹುಲಿಗಳ ಆಯಸ್ಸು ೧೦ ರಿಂದ ೧೫ ವರ್ಷ ಅಷ್ಟೇ.. ಆದರೆ ಈ ಬ್ರಹ್ಮ ಬರೋಬ್ಬರಿ ೨೦ ವರ್ಷ ಬದುಕಿ ತೋರಿಸಿದ್ದಾನೆ..


ಅದು ೨೦೦೮ರ ಸಮಯ.. ಅಲ್ಲೀತನಕ ಈ ಹುಲಿ ಕಾಡುಮೇಡುಗಳಲ್ಲಿ ಸ್ವಚ್ಛಂಧವಾಗಿ ಓಡಾಡಿಕೊಂಡಿತ್ತು.. ಆದ್ರೆ ಕಾಡಲ್ಲಿ ಈತನಿಗೆ ಆಹಾರ ಸಿಗದಾಗಿತ್ತು.. ಹೀಗಾಗಿ ಗ್ರಾಮಗಳಿಗೆ ಲಗ್ಗೆ ಇಡತೊಡಗಿದ.. ವ್ಯಕ್ತಿಯೊಬ್ಬರನ್ನು ಬಲಿ ತೆಗೆದುಕೊಂಡಿದ್ದ.. ಈ ಕಾರಣಕ್ಕಾಗಿಯೇ ಈತ ನರಭಕ್ಷಕ ಎಂಬ ಕುಖ್ಯಾತಿ ಗಳಿಸಿಕೊಂಡಿದ್ದ.. ನರಮಾನವರನ್ನು ಕೊಂದು ತಿಂದರೆ ಸುಮ್ಮನೆ ಬಿಡುತ್ತಾರೆಯೇ..?. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದೇ ಬಿಟ್ಟಿದ್ದರು.. ಹಲವು ರೀತಿಯ ಸರ್ಕಸ್‌ ನ ನಂತರ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ತೆರಾಲು ಗ್ರಾಮದ ಬಳಿ ಸೆರೆ ಹಿಡಿಯಲಾಯಿತು.. ಅದು ನಡೆದದ್ದು ೨೦೦೮ರ ಮಾರ್ಚ್‌ ೧೮ರಂದು..


ಹೀಗೆ ಸೆರೆಯಾಗಿ ಮೈಸೂರು ಮೃಗಾಲಯಕ್ಕೆ ಬಂದ ಹುಲಿಗೆ ಬ್ರಹ್ಮ ಎಂದು ಹೆಸರಿಡಲಾಯಿತು.. ಈ ಹೆಸರಿಡಲು ಒಂದು ಕಾರಣ ಕೂಡಾ ಇದೆ.. ಇದು ಸೆರೆ ಸಿಕ್ಕಿದ್ದು ನಾಗರಹೊಳೆ ಅಭಯಾರಣ್ಯ ಹಾಗೂ ತೆರಾಲು ಗ್ರಾಮದ ನಡುವೆ ಇರುವ ಬ್ರಹ್ಮಗಿರಿ ಎಂಬ ಸ್ಥಳದಲ್ಲಿ.. ಹೀಗಾಗಿ ಅದೇ ಹೆಸರನ್ನೇ ಈ ಹುಲಿಗೆ ಇಡಲಾಯಿತು.. ಸಿಕ್ಕಸಿಕ್ಕವರ ಮೇಲೆಲ್ಲಾ ದಾಳಿ ಮಾಡುತ್ತಿದ್ದ ಬ್ರಹ್ಮ, ಮೃಗಾಲಯಕ್ಕೆ ಬರುತ್ತಲೇ ಸೌಮ್ಯ ರೀತಿಯಲ್ಲಿ ವರ್ತಿಸತೊಡಗಿದ.. ಅಲ್ಲಿದ್ದ ಹೆಣ್ಣು ಹುಲಿಗಳ ಜೊತೆ ಸ್ನೇಹ ಬೆಳೆಸಿದ.. ಸಂತಾನೋತ್ಪತ್ತಿ ಶುರು ಮಾಡಿದ.. ಈ ಕಾರಣಕ್ಕಾಗಿಯೇ ಬ್ರಹ್ಮ ಎಲ್ಲರ ಅಚ್ಚುಮೆಚ್ಚಿನ ಹುಲಿಯಾಗಿದ್ದ..


ಈ ಬ್ರಹ್ಮನಿಗೆ ಯೋಗಬ್ರಹ್ಮನ ಅಭಯವೂ ಸಿಕ್ಕಿತು.. ಇಡೀ ವಿಶ್ವಕ್ಕೇ ಯೋಗದ ಮಹತ್ವವನ್ನು ತಿಳಿಸಿಕೊಟ್ಟ ಯೋಗಗುರು ಬಿ.ಕೆ.ಎಸ್‌.ಅಯ್ಯಂಗಾರ್‌ ಅವರು ಮೃಗಾಲಯಕ್ಕೆ ಬಂದಿದ್ದಾಗ ಬ್ರಹ್ಮನ ಬಗ್ಗೆ ತಿಳಿದು ಖುಷಿಯಾಗಿದ್ದರು.. ಬ್ರಹ್ಮನನ್ನು ಜೀವನಪರ್ಯಂತ ದತ್ತು ಪಡೆದರು.. ಬ್ರಹ್ಮನ ಜೊತೆಗೆ ಅನಸೂಯಾ ಎಂಬ ಹೆಣ್ಣು ಹುಲಿಯನ್ನೂ ಬಿ.ಕೆ.ಎಸ್‌.ಅಯ್ಯಂಗಾರ್‌ ಅವರು ಜೀವನಪರ್ಯಂತ ದತ್ತು ಪಡೆದರು.. ಎರಡೂ ಹುಲಿಗಳ ಪೋಷಣೆಗೆ ಅಯ್ಯಂಗಾರ್‌ ಅವರು ೨೦ ಲಕ್ಷ ರೂಪಾಯಿಯನ್ನು ನೀಡಿದ್ದರು.. ಸದ್ಯ ಬ್ರಹ್ಮ ಇಹಲೋಕ ತ್ಯಜಿಸಿದ್ದಾನೆ.. ಆದರೆ ಆತನ ಸಂತತಿ ಮೈಸೂರು ಕೃಷ್ಣರಾಜೇಂದ್ರ ಮೃಗಾಲಯಕ್ಕೆ ಮೆರುಗು ನೀಡುತ್ತಿದೆ.. ಮೈಸೂರು ಮೃಗಾಲಯದಲ್ಲಿ ಪ್ರಸ್ತುತ 10 ಗಂಡು ಹಾಗೂ 6 ಹೆಣ್ಣು ಹುಲಿಗಳಿವೆ..

Leave a Reply

Your email address will not be published. Required fields are marked *