ತಾಂಬೂಲಂ ಸಮರ್ಪಯಾಮಿ

Share This

ನಮ್ಮ ಭಾರತೀಯ ಸಂಪ್ರದಾಯದಲ್ಲಿ ವಿಶೇಷವಾಗಿ ದಕ್ಪಿಣ ಭಾರತದಲ್ಲಿ ಪ್ರತಿ ಸಂತೋಷಕೂಟದ ಸಮಾರಂಭದಲ್ಲಿ ಬಂದ ಅತಿಥಿಗಳಿಗೆ ಊಟದ ನಂತರ ತಾಂಬೂಲ ಕೊಡುವುದು ವಾಡಿಕೆ. ಇದು ನಮ್ಮ ಸಂಸ್ಕೃತಿಗೆ ಹೊಸತೇನಲ್ಲ. ಪ್ರತಿ ಅತಿಥಿಗೆ ಹೊರಡುವ ಮೊದಲು “ತಂಬೂಲ” ನೀಡಲಾಗುತ್ತದೆ. ಬಾಳೆಹಣ್ಣು ತೆಂಗಿನಕಾಯಿ ಅಥವಾ ಯಾವುದೇ ಹಣ್ಣಿನ ಜೊತೆಗೆ ವೀಳ್ಯದೆಲೆ ಮತ್ತು ಅಡಿಕೆ ಒಂದು ಬ್ಯಾಗಿಗೆ ಇರಿಸಿ ಕೊಡುತ್ತಾರೆ, ಇನ್ನೂ ಅನುಕೂಲಸ್ಥರಾದರೆ  ಸಿಹಿ ಜೊತೆ ಉಡುಗೊರೆ ನೀಡುವುದು ಉಂಟು. ಅತಿಥಿಗಳು ತಮ್ಮ ಮನೆಗೆ ಭೇಟಿ ನೀಡಿದ್ದಕ್ಕಾಗಿ ಮೆಚ್ಚುಗೆಯನ್ನು ತೋರಿಸಲು ಇದು ಒಂದು ಸೂಚಕ. ಅತಿಥಿಗೆ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಹಾರೈಸುವುದು ತಂಬೂಲ ಹಿಂದಿನ ಉದ್ದೇಶ. ವೀಳ್ಯೆದ ಎಲೆಯನ್ನು ಅಡಿಕೆ ಕಾಯಿ, ಸುಣ್ಣದ ಜೊತೆಗೆ ಸುತ್ತಿ ಅಗಿಯುವುದು ಹಳ್ಳಿಗಳಲ್ಲಿ ಇಂದಿಗೂ ಸಾಮಾನ್ಯ ದೃಶ್ಯ. ಅತಿಥಿಗಳು ಮನೆಗೆ ಭೇಟಿ ನೀಡಿದರೆ ಮೊದಲು ನೀರಿನ್ನು ಅಥವಾ ಪಾನೀಯವನ್ನು ನೀಡಲಾಗುತ್ತದೆ ಮತ್ತು ನಂತರ ವೀಳ್ಯೆದ ಎಲೆ, ಅಡಿಕೆ ಕಾಯಿ ಮತ್ತು ಇತರ ಭಕ್ಷ್ಯಗಳ ತಟ್ಟೆಯನ್ನು ಅತಿಥಿಯ ಮುಂದಿರಿಸಿ ಸಾವಕಾಶವಾಗಿ ಮಾತನಾಡಲು ಪ್ರಾರಂಭಿಸುತ್ತಾರೆ.

 

ಪುರಾಣ ಮತ್ತು ಇತಿಹಾಸದಲ್ಲಿ ತಾಂಬೂಲ / ಎಲೆ ಅಡಿಕೆಯ ಮಹತ್ವ

ಭಾರತದ ಸಾಮಾಜಿಕ,ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯನ್ನು ಗಮನಿಸಿದಾಗ ‘ತಾಂಬೂಲ’ ಇಂದಿಗೂ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆ. ಪುರಾಣಗಳಿಂದ ಹಿಡಿದು ಇತಿಹಾಸದವರೆವಿಗೂ ಎಲ್ಲಾ ಭಾರತೀಯ ಮನೆಗಳಲ್ಲಿ ಜಾತಿ ಭೇದವಿಲ್ಲದೇ ಅವರ ಜೀವನದ ಜನನದಿಂದ ಮರಣದವರೆಗಿನ ಷೋಡಶ ಸಂಸ್ಕಾರಗಳಲ್ಲಿ ತಾಂಬೂಲದ ಪಾತ್ರ ಮಹತ್ವದ ಪಾತ್ರ ವಹಿಸುತ್ತದೆ. ದೈನಂದಿನ ದೈವಪೂಜೆಯಲ್ಲಿ ಭಗವಂತನಿಗೆ ನೈವೇದ್ಯ ಸಮರ್ಪಣೆ ಮಾಡುವಾಗ ‘ಪೂಗೀ ಫಲ ತಾಂಬೂಲಂ ಸಮರ್ಪಯಾಮಿ’ ಎನ್ನುತ್ತಾರೆ. ಮದುವೆ ನಿಶ್ಚಿತಾರ್ಥಗಳಲ್ಲಿ ತಾಂಬೂಲವನ್ನು ಬದಲಾಯಿಸಿಕೊಳ್ಳುತ್ತಾರೆ, ಈಗೆ ಮಾಡಿದರೆ ಮದುವೆ ನಿಗದಿಯಾದಂತೆ. ಹಾಗೆಯೇ ಮುತೈದೆಯರಿಗೆ ಅರಿಸಿನ ಕುಂಕುಮ ಹೂವಿನ ಜೊತೆಗೆ ತಾಂಬೂಲ ಕೊಟ್ಟು ಕಳಿಸುವುದುಂಟು. ಪುರಾಣಗಳಲ್ಲಿ ತಾಂಬೂಲ ಕುರಿತಂತೆ ಹೀಗೊಂದು ಕಥೆಯಿದೆ. ಸಮುದ್ರ ಮಂಥನ ಸಮಯದಲ್ಲಿ ಸಮುದ್ರದಿಂದ ಉದ್ಭವಿಸಿದ ಅಮೃತವನ್ನು ವಿಷ್ಣು ಮೋಹಿನಿಯ ರೂಪದಲ್ಲಿ ದೇವತೆಗಳಿಗೆ ಹಂಚುತ್ತಾನೆ. ಹಂಚಿ ಮಿಕ್ಕುಳಿದ ಅಮೃತದ ಪಾತ್ರೆಯನ್ನು ಮೋಹಿನಿಯು ಇಂದ್ರನ ಪಟ್ಟದಾನೆಯಾದ ಐರಾವತದ ಬಳಿಯಿರಿಸುತ್ತಾಳೆ. ಐರಾವತದ ಸೊಂಡಿಲ ಬೀಸುವಿಕೆಗೆ ಅಮೃತ ಭೂಮಿಯ ಮೇಲೆ ಚೆಲ್ಲಲ್ಪಟ್ಟು ಅಲ್ಲಿ ಅತಿ ದಿವ್ಯವೂ, ಸುಂದರವೂ, ಮನಮೋಹಕವೂ ಆದ ಬಳ್ಳಿಯೊಂದು ಸೃಷ್ಟಿಯಾಗುತ್ತದೆ. ದೇವೇಂದ್ರನು ಧನ್ವಂತರಿಯನ್ನು ಆ ಬಳ್ಳಿಯ ಮಹತ್ವವನ್ನು ತಿಳಿಸಬೇಕೆಂದು ಕೇಳಿಕೊಂಡಾಗ ಧನ್ವಂತರಿಯು  ಅದರ ಔಷಧಯುಕ್ತ ಗುಣಗಳು ಮತ್ತು ಮಹತ್ವವನ್ನು ದೇವತೆಗಳಿಗೆ ತಿಳಿಸುತ್ತಾನೆ. ಅದರ ಆಕಾರ, ಬಣ್ಣ ಮತ್ತು ಸುವಾಸನೆಗೆ ಮಹಾವಿಷ್ಣುವು ಮಾರುಹೋಗುತ್ತಾನೆ. ಪೂಗೀಫಲವು ಬ್ರಹ್ಮನಿಗೆ, ತಾಂಬೂಲವು ವಿ‍ಷ್ಣುವಿಗೆ ಮತ್ತು ಸುಣ್ಣವು ಶಿವನಿಗೆ ಪ್ರಿಯವೆಂದು ಬಣ್ಣಿಸಲಾಗಿದೆ.

ತಾಂಬೂಲದ ಹದಿಮೂರು ಗುಣಗಳನ್ನು ವರ್ಣಿಸುವ ಸಂಸ್ಕೃತದ ಶ್ಲೋಕವೊಂದು ಹೀಗಿದೆ :

ತಾಂಬೂಲಂ ಕಟುತಿಕ್ತಮುಷ್ಣ ಮಧುರಂ ಕ್ಷಾರಂ ಕಷಾಯಾನ್ವಿತಂ |
ವಾತಘ್ನಂ ಕ್ರಿಮಿನಾಶನಂ ಕಫಹರಂ ದುರ್ಗಂಧ ನಿರ್ನಾಶನಂ ||
ವಕ್ತಸ್ಯಾಭರಣಂ ವಿಶುದ್ಧಿಕರಣಂ ಕಾಮಾಗ್ನಿ ಸಂದೀಪನಂ |
ತಾಂಬೂಲಸ್ಯ ಸಖೇ ತ್ರಯೋದಶ ಗುಣಾಃ ಸ್ವರ್ಗೇಪಿ ತೇ ದುರ್ಲಭಃ ||

ಇನ್ನೂ ಇತಿಹಾಸಕ್ಕೆ ಬರುವುದಾದರೆ 6ನೇಯ ಶತಮಾನದಲ್ಲಿ ಆಳಿದ ಚಾಲುಕ್ಯ ದೊರೆ ಸೋಮೇಶ್ವರ ತನ್ನ ‘ಮಾನಸೋಲ್ಲಾಸ’ ಎಂಬ ಕೃತಿಯಲ್ಲಿ ತಾಂಬೂಲ ಚರ್ವಣವು ರಾಜರ ಹವ್ಯಾಸಗಳಲ್ಲಿ ಒಂದು ಎಂದು ತಿಳಿಸಿದ್ದಾನೆ. ಮುಂದೆ 8ನೆಯ ಶತಮಾನದಲ್ಲಿ ಚಂಡೇಲದ ರಜಪೂತರು ತಮ್ಮ ರಾಜಧಾನಿ ಮಹೋಲದಲ್ಲಿ ತಾಂಬೂಲವನ್ನು ಜನಪ್ರಿಯಗೊಳಿಸಲೋಸುಗ ರಾಜಸ್ಥಾನದಿಂದ ತಾಂಬೋಲಿಗಳನ್ನು (ಪಾನ್ ಬೀಡಾ ಕಟ್ಟುವವರು) ಕರೆಸಿದರೆಂದು ಉಲ್ಲೇಖಗಳಿವೆ. ಕ್ಷತ್ರಿಯರಲ್ಲಿ ಶತ್ರುದಮನಕ್ಕೆ ಮೊದಲು ರಣ ಅಂಗಳಕ್ಕೆ ಹೊರಡುವ ಮುನ್ನ ಅರಸನಿಂದ ‘ರಣವೀಳ್ಯ’ ವನ್ನು ಪಡೆಯುವ ಪದ್ಧತಿಯಿತ್ತು ಎಂದು ಇತಿಹಾಸ ಹೇಳುತ್ತದೆ. ಜಾಗ್ನಿಕ್ ಎಂಬ ಲೇಖಕ ತನ್ನ ‘ಅಲ್ಕಾಖಂಡ್’ ಎನ್ನುವ ರಚನೆಯಲ್ಲಿ ತಾಂಬೂಲವು ರಜಪೂತರ ಜೀವನದ ಅವಿಭಾಜ್ಯ ಅಂಗವಾಗಿತ್ತೆಂದು ತಿಳಿಸುತ್ತಾನೆ. ರಣಾಂಗಣದಲ್ಲಿ ಪತಿಯ ನಿಧನಾ ನಂತರ ಸಹಗಮನ ಹೊರಡುವ ರಜಪೂತ ಸ್ತ್ರೀ ತನ್ನ ಅಂತಿಮ ತಾಂಬೂಲವನ್ನು ಸವಿದು ಸಹಗಮನಕ್ಕೆ ಅಣಿಯಾದಳಂತೆ ಎಂದು ಇತಿಹಾಸ ಹೇಳುತ್ತದೆ.

 

ತಾಂಬೂಲದ ಹಿಂದಿರುವ ಆರೋಗ್ಯದ ಗುಟ್ಟು

ತಾಂಬೂಲವು ಖಾರ, ಹುಳಿ, ಉಷ್ಣ, ಮಧುರ, ಕ್ಷಾರ ಮತ್ತು ಒಗರೆಂಬ ರುಚಿಗಳನ್ನು ಒಳಗೊಂಡಿದೆ. ವಾತ, ಕಫಗಳನ್ನು ಪರಿಹರಿಸುವ, ಬಾಯಿ ವಾಸನೆಯನ್ನು ಹೋಗಲಾಡಿಸುವ, ಉದರದಲ್ಲಿ ಅನಾರೋಗ್ಯಕ್ಕೆ ಕಾರಣವಾದ ಕ್ರಿಮಿಗಳನ್ನು ನಾಶ ಮಾಡುತ್ತದೆ ಅಡಿಕೆಯಲ್ಲಿರುವ ಅಲ್ಕೋಲಾಯಿಡ್ ಮತ್ತು ಟ್ಯಾನಿನ್ ಎಂಬ ರಾಸಾಯನಿಕ ಅಂಶಗಳು ಸುಣ್ಣದೊಡನೆ ಸೇರಿ ನಾವು ತಿನ್ನುವ ತಾಂಬೂಲಕ್ಕೆ ಕೆಂಪು ಬಣ್ಣವನ್ನು ನೀಡುತ್ತದೆ. ಸುಣ್ಣವಿಲ್ಲದೆ ತಾಂಬೂಲಕ್ಕೆ ಬಣ್ಣವಿಲ್ಲ. ರಾಜ ಮಹಾರಾಜರು ಸೇವಿಸುವ ತಾಂಬೂಲದಲ್ಲಿ ಸುಣ್ಣಕ್ಕೆ ಕೇಸರಿ ಮತ್ತು ಬೆಣ್ಣೆಯನ್ನು ಸೇರಿಸಲಾಗುತ್ತಿತ್ತು. ತಾಂಬೂಲ ಸೇವಿಸುವಾತನ ಬೆರಳ ಉಗುರಲ್ಲಿ ತೆಗೆಯಲು ಬರುವಷ್ಟು ಸುಣ್ಣವನ್ನು ಎಲೆಗೆ ಸವರಬೇಕು. ಇದು ತಾಂಬೂಲದಲ್ಲಿರಬೇಕಾದ ಸುಣ್ಣದ ಪ್ರಮಾಣ. ವೀಳ್ಯದೆಲೆ, ಅಡಿಕೆ, ಸುಣ್ಣಗಳೊಂದಿಗೆ ಯಾಲಕ್ಕಿ, ಲವಂಗ, ಬದಾಮು, ಕೊಬ್ಬರಿ ತುರಿ, ಪಚ್ಚೆ ಕರ್ಪೂರಗಳನ್ನು ಬೆರೆಸಿ ತಯಾರಿಸುವ ತಾಂಬೂಲ ಸೇವನೆಯು ಬಾಯಿಯ ದುರ್ಗಂಧವನ್ನು ಹೊಗಲಾಡಿಸುವ ಜತೆಗೆ ಆರೋಗ್ಯವರ್ಧಕವೂ ಹೌದು. ತಂಬಾಕುವಿನಿಂದ ಹೊರತಾದ ತಾಂಬೂಲ ಸೇವನೆ ಆರೋಗ್ಯವರ್ಧಕವೆಂದು ಆಯುರ್ವೇದ ತಿಳಿಸುತ್ತದೆ.ಇಂದು, ಸ್ಥೂಲಕಾಯತೆ, ಮಧುಮೇಹ, ಕೊಲೆಸ್ಟ್ರಾಲ್ ಮುಂತಾದ ಜೀವನಶೈಲಿ ಕಾಯಿಲೆಗಳು ಸಂಸ್ಕರಿಸಿದ ಆಹಾರವನ್ನು ಸರಿಯಾಗಿ ಸೇವಿಸದ ಕಾರಣ ಉಂಟಾಗುತ್ತವೆ. ವೀಳ್ಯದೆಲೆ ಮತ್ತು ಅಡಿಕೆ ಕಾಯಿ ಜಿಗಿದರೆ ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಅನೇಕ ಆಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿದ್ದು ದೇಹವನ್ನು ರಕ್ತದ ಹರಿವಿನಲ್ಲಿರುವ ವಿಷದಿಂದ ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಒಣಗಿದ ಬೆಟೆಲ್ ಎಲೆಗಳು ಮತ್ತು ಬೆಟೆಲ್ ಕಾಯಿ ಮಿಶ್ರಣದ ಮಳಿಗೆಗಳಲ್ಲಿ ಇಂದು ಕ್ಯಾಪ್ಸುಲ್ ಲಭ್ಯವಿದೆ.

 

 

ದೈನಂದಿನ ಬದುಕಿನಲ್ಲಿ ತಂಬೂಲ

ತಾಂಬೂಲವನ್ನು ಪೂಜೆ-ಪುನಸ್ಕಾರಗಳಲ್ಲಿ, ಯಾಗ-ಯಜ್ಞಗಳಲ್ಲಿ, ವ್ರತಾಚರಣೆಗಳಲ್ಲಿ, ದಾನ-ಧರ್ಮದಲ್ಲಿ, ಅತಿಥಿ ಸತ್ಕಾರದಲ್ಲಿ, ಸಂಧಾನದಲ್ಲಿ ಉಪಯೋಗಿಸಲಾಗುತ್ತದೆ. ನಮ್ಮ ಹಿಂದುಗಳ ಬದುಕಿನಲ್ಲಂತೂ ತಾಂಬೂಲ ಅನಿವಾರ್ಯವಾಗಿದೆ. ಜಾತಿ, ಮೇಲು-ಕೀಳು, ಬಡವ-ಬಲ್ಲಿದ ಎಂಬುದನ್ನು ಮರೆತು ಉಪಯೋಗಿಸುವ ಏಕೈಕ  ವಸ್ತುವೆಂದರೆ ಅದು ‘ತಾಂಬೂಲ’. ಬಡವ ಬಲ್ಲದ ಯಾರೇ ಇರಲಿ ಹಳ್ಳಿಯ ಮನೆಯ ಜಗಲಿಯ ಮೇಲೆ ತಟ್ಟೆಯಲ್ಲಿರುತ್ತಿದ್ದ ತಾಂಬೂಲವನ್ನು ಬಳಸಿ ಸಾವಕಾಶವಾಗಿ ಮಾತನಾಡಲು ಪ್ರಾರಂಭಿಸುತ್ತಾರೆ. ಅತಿಥಿ ಸತ್ಕಾರವಾದ ಮೇಲೆ ಎಲೆ ಅಡಿಕೆ ಹಾಕಿಕೊಂಡೇ ಉಭಯ ಕುಶಲೋಪರಿ ಸಮಾಚಾರಗಳನ್ನು ಶುರುಮಾಡುತ್ತಿದ್ದರು. ಹಳ್ಳಿಗಳಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ಪ್ರಾರಂಭದ ಮೊದಲು ಎಲೆ ಅಡಿಕೆ, ಸುಣ್ಣ, ತಂಬಾಕುಗಳನ್ನು ನೀಡಿವ  ಪದ್ಧತಿ ಈಗಲೂ ನೋಡಸಿಗುತ್ತದೆ. ಎಲೆ ಅಡಿಕೆ ಅಭ್ಯಾಸವಿದ್ದ ಹೆಂಗಸರು ಸೊಂಟಕ್ಕೆ ಬಟ್ಟೆಯಿಂದ ಹೊಲಿದ ಎಲೆ ಅಡಿಕೆಯ ಚೀಲವೊಂದು ಇರಲೇ ಬೇಕು. ಕೆಲವರು ಹೊಗೆಸೊಪ್ಪು ಉಪಯೋಗಿಸುವುದುಂಟು.

ಬೆಣ್ಣೆ ಕಾಸಿ ತುಪ್ಪ ತಯಾರಿಕೆಯಲ್ಲಿ ತುಪ್ಪ ಹದವಾಗಿ ಸಿದ್ಧಗೊಂಡಾಗ ಅದಕ್ಕೆ ವೀಳ್ಯದೆಲೆಯನ್ನು ಹಾಕಿ ಅದನ್ನು ಸುಗಂಧಯುಕ್ತವಾಗಿಸುವ ಕ್ರಮವಿದೆ. ಬಾಣಂತಿಯರಿಗೆ ಔಷಧಯುಕ್ತವಾದ ತಾಂಬೂಲವನ್ನು ನೀಡುವುದನ್ನು ಆಯುರ್ವೇದ ತಿಳಿಸುತ್ತದೆ. ವೀಳ್ಯದೆಲೆಯು ಲಕ್ಷ್ಮಿಯ ವಾಸಸ್ಥಾನವೆಂಬ ನಂಬಿಕೆಯಿಂದ ಅದನ್ನು ಮುಸ್ಸಂಜೆ ಹೊತ್ತು ಕೊಯ್ಯುವುದು, ರಜಸ್ವಲೆಯರು ಮುಟ್ಟುವುದು ನಿ‍ಷಿದ್ಧವಾಗಿದೆ. ಇನ್ನು ತಾಂಬೂಲದ ಪೆಟ್ಟಿಗೆ, ತಟ್ಟೆ, ಅಡಿಕೆ ಕತ್ತರಿಸುವ ಕತ್ತರಿಯಲ್ಲಿ ಕಲಾತ್ಮಕತೆಯ ವಿವಿಧ ಸೊಬಗನ್ನು ನಾವು ಕಾಣಬಹುದು.

ಮಹಾರಾಷ್ಟ್ರದ ವಿವಾಹದ ನಂತರ ನವದಂಪತಿಗಳಿಗೆ ತಾಂಬೂಲ ಬಳಸಿ ಒಂದು ಶಾಸ್ತ್ರ ಮಾಡಿಸಲಾಗುತ್ತದೆ. ವಧೂ ತನ್ನ ಕೆಂದುಟಿಗಳಲ್ಲಿ ಕಚ್ಚಿ ಹಿಡಿದ ತಾಂಬೂಲವನ್ನು ವರ ತನ್ನ ಬಾಯಿಯಿಂದ ಅರ್ಧ ತುಂಡರಿಸಿ ಸವಿಯಬೇಕು. ನೋಡುಗರಿಗೆ  ಮನರಂಜನೆ ನೀಡುವುದರ ಜೊತೆಗೆ ವಧೂವರರು ತಾವು ಬಯಸುವ ಸಾಮೀಪ್ಯದ ಕುರಿತಾದ ಅಂಜಿಕೆ, ಸಂಕೋಚಗಳನ್ನು ನಿವಾರಿಸಲು ಈ ಶಾಸ್ತ್ರವಿರಬಹುದು. ಹಿಂದಿನ ಕಾಲದಲ್ಲಿ ಮದುವೆಯ ನಂತರ, ಗಂಡನು ತನ್ನ ಹೆಂಡತಿಯಿಂದ ಮಾತ್ರ ಅಗಿಯಲು ಮಡಿಸಿದ ವೀಳ್ಯೆದ ಎಲೆಯನ್ನು ಪಡೆಯುತ್ತಿದ್ದನು. ವಾತ್ಸಾಯನನ ಕಾಮಸೂತ್ರದಲ್ಲಿ ಮಿಲನದ ಮುನ್ನ ತಾಂಬೂಲ ಸವಿಯಬೇಕೆಂಬ ನಿಯಮವಿದೆ.

 

ತಾಂಬೂಲ ಕೂಡ ಬದಲಾಗಿದೆ….

ಈಗ ಕಾಲ ಬದಲಾಗಿದೆ….. ಆಧುನಿಕ ಯುಗದಲ್ಲಿ  ‘ಪಾನ್ ಬೀಡಾ’ಗಳಾಗಿ ಪರಿವರ್ತನೆಯಾಗಿ ನಗರಗಳ ಯಾವುದೇ ಹೊಟೆಲ್ ಗಳ ಮುಂದೆ ಪಾನ್ ವಾಲಾ ಸಿಗುತ್ತಾನೆ. ಮದುವೆಯ ಆರತಕ್ಷತೆಗಳಲ್ಲಿ ನಿಮ್ಮ ಆಯ್ಕೆಯ ಪಾನ್ ಗೆ ಹದವಾಗಿ ಸುಣ್ಣ ಬೆರೆಸಿ ವಿವಿಧ ರೀತಿಯ ಪರಿಮಳಯುಕ್ತ ಮಸಾಲೆಗಳನ್ನು ಸೇರಿಸಿ ತ್ರಿಕೋನಾಕೃತಿಯಲ್ಲಿ ಅದನ್ನು ಮಡಚಿ ಕೊಡುತ್ತಾರೆ. ಗೋವಿಂದ್ ಬೀಡಾ, ಕಪೂರ್ ಬೀಡಾ, ಕುಲ್ಪಿ ಬೀಡಾ, ಮೊಂದ್ ಬೀಡಾ, ಕತರ್ ಬೀಡಾ, ಗೋಂಡ್ ಬೀಡಾ ಮುಂತಾದ ಹೆಸರುಗಳಲ್ಲಿ ದೊರಕುತ್ತವೆ.

ಇಂದು, ನಾವು ನಮ್ಮ ಅತಿಥಿಗಳಿಗೆ ಕಾಫಿ ಅಥವಾ ಚಹಾವನ್ನು ಮುಖ್ಯವಾಗಿ ನಗರಗಳಲ್ಲಿ ನೀಡುತ್ತೇವೆ. ಸಮಾರಂಭಗಳಲ್ಲಿ ತಂಬೂಲದ ಜೊತೆಗೆ ರಿಟರ್ನ್ ಉಡುಗೊರೆ ನೀಡುತ್ತಾರೆ. ರಿಟರ್ನ್ ಉಡುಗೊರೆಗಳಿಗೆ ಪ್ಲಾಸ್ಟಿಕ್ ಪಾತ್ರೆಗಳು ಅಥವಾ ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಾರೆ. ಈಗ ಪ್ಲಾಸ್ಟಿಕ್ ನಿಷೇಧವಾಗಿರುವುದರಿಂದ ಪರಿಸರ ಸ್ನೇಹಿ, ನೈಸರ್ಗಿಕವಾದ ಬಟ್ಟೆಯ ಚೀಲಗಳನ್ನು ಬಳಸಿ ಸ್ಥಳೀಯ ಉತ್ಪನ್ನಗಳನ್ನು ಸಹಕರಿಸೋಣ.

ಇದರ ವಿಕೃತ ರೂಪವನ್ನು ನಾವಿಂದು ‘ಸುಪಾರಿ’ಯ ರೂಪದಲ್ಲಿ ಕಾಣಬಹುದು. ಆರೋಗ್ಯಕ್ಕೆ ಹಾನಿ ಮಾಡುವ ತಂಬಾಕನ್ನು ಬಳಸದೇ ಆಯರ್ವೇದಲ್ಲಿ ತಿಳಿಸಿದಂತೆ ಔಷಧಯುಕ್ತ ಗುಣಗಳುಳ್ಳ ಸುವಾಸನಾಯುಕ್ತ ಸಾಂಪ್ರದಾಯಿಕ ತಾಂಬೂಲವನ್ನು ಸೇವಿಸಿ ಆರೋಗ್ಯವಂತರಾಗಿ ದೀರ್ಘಾಯುಷಿಗಳಾಗೋಣ. ನಮ್ಮ ಪ್ರಾಚೀನ ಪದ್ಧತಿಗಳ ಬಗ್ಗೆ ಹೆಚ್ಚಿನ ಜ್ಞಾನ ಪಡೆದು ಆರೋಗ್ಯದ ಪ್ರಯೋಜನಗಳನ್ನು ಹೊಂದೋಣ.

ಎನಂತೀರಿ?….. 

 

 

Leave a Reply

Your email address will not be published. Required fields are marked *