ಕಥೆ ಹೇಳುವ ಕಲೆ !!!

Share This

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ? ಎಂಬ ನಾಣ್ಣುಡಿಯಂತೆ ಬಾಲ್ಯದಲ್ಲಿಯೇ ಓದುವ ಮತ್ತು ಕಥೆಗಳನ್ನು ಕೇಳುವ ಹವ್ಯಾಸ ಮಕ್ಕಳ ಮಾನಸಿಕ ಬೆಳವಣಿಗೆಗೆ ಮತ್ತು ಅವರ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಹೇಗೆ ಮಹತ್ವವಾದ ಪಾತ್ರ ವಹಿಸುತ್ತದೆ ಎಂದು ಇಲ್ಲಿ ವಿವರಿಸಲು ಪ್ರಯತ್ನಸಿದ್ದೇವೆ.

ಈಗಿನ ಆಧುನಿಕ ಜಗತ್ತಿನಲ್ಲಿ ಸಮಾಜಿಕ ಹಾಗೂ ವೈಯುಕ್ತಿಕ ಜೀವನ ಗೊಂದಲಮಯವಾಗಿದೆ ಎಂದೇ ಹೇಳಬಹುದು. ಎಲ್ಲ ಸಂಬಂಧಗಳಲ್ಲಿಯೂ ಒಡಕುಗಳನ್ನು ಕಾಣಬಹುದು. ಪೋಷಕರಿಬ್ಬರೂ ದುಡಿಯುವ ಈ ಕಾಲದಲ್ಲಿ ತಮ್ಮ ಮಕ್ಕಳಿಗೆ ಸಮಯ ನೀಡಲಾಗದೇ ಪರಿತಪಿಸುತ್ತಾರೆ. ಮಕ್ಕಳನ್ನು ಕೇವಲ ಹೆತ್ತು, ಬೆಳೆಸಿ, ಅವರ ಅವಶ್ಯಕತೆಯನ್ನು ಪೊರೈಸಿದರಷ್ಟೆ ಸಾಲದು. ಮಕ್ಕಳ ಜೊತೆ ಕೂತು ಅವರೊಂದಿಗೆ ಬೆರೆತು ಅವರಿಗೆ ಬೇಕಿರುವ ನೈತಿಕ ಬೆಂಬಲ ನೀಡಬೇಕಾಗುತ್ತದೆ. ಇದನ್ನು ಕೇವಲ ಮಾತಿನಲ್ಲಿ ಹೇಳಿದರೆ ಮಕ್ಕಳಿಗೆ ಅರ್ಥವಾಗುವುದಿಲ್ಲ. ಉದಾಹರಣೆ ಅಥವಾ ಕಥೆಗಳ ಮೂಲಕ ನೈತಿಕ ಶಿಕ್ಷಣ ನೀಡಿದರೆ ಅವರು ತುಂಬಾ ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಮಕ್ಕಳ ನೈತಿಕ ಶಿಕ್ಷಣಕ್ಕೆ ಒತ್ತು ನೀಡಲು ಆನೇಕ ಕವಿಗಳು ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಅನೇಕ ನೀತಿಕಥೆಗಳು ಹಾಗೂ ತತ್ವ ಭೋದಕ ಕಥೆಗಳನ್ನು ರಚಿಸಿದ್ದಾರೆ. ಆದರೆ ಹಿಂದಿನ ಕಾಲದಲ್ಲಿ ಇದಾವುದೂ ಇರಲಿಲ್ಲ. ತಮ್ಮ ಅಜ್ಜ- ಅಜ್ಜಿ ಬಿಡುವಿನ ಸಮಯದಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೇಳುತಿದ್ದ ಪೌರಾಣಿಕ ಕಥೆಗಳೇ ಮಕ್ಕಳ ವ್ಯಕ್ತಿತ್ವವನ್ನು ತಿದ್ದಿ ತೀಡುತ್ತಿತ್ತು. ಆದರೆ ಈಗಿನ ಆಧುನಿಕ ಯುಗದಲ್ಲಿ ಜನರ ಜೀವನದಲ್ಲಿ ತುಂಬಾನೇ ವ್ಯತ್ಯಾಸವಾಗಿದೆ ಅದರಲ್ಲೂ ಟಿವಿ, ಮೊಬೈಲ್ ಬಂದ ಮೇಲಂತೂ ಈ ಕಥೆ ಹೇಳುವ ಕಲೆ ಮರತೇ ಹೋದಂತಾಗಿದೆ.

 

 

ಎಲ್ಲಾ ಪೋಷಕರು ಕಥೆ ಹೇಳುವ ಕಲೆಯನ್ನು ರೂಢಿಸಿ, ಅಭ್ಯಾಸ ಮಾಡಿಕೊಳ್ಳಿ. ತಾವೇ ಖುದ್ದಾಗಿ ಕಥೆಗಳಲ್ಲಿ ಆಸಕ್ತಿ ವಹಿಸಿದರೆ ಈ ಕಲೆಯಲ್ಲಿ ನಿಪುಣತೆ ಪಡಿಯುತ್ತೀರಿ. ಮೊದಲು ನಿಮ್ಮ ಮನಸ್ಸನ್ನು ಸಂತೋಷ ಮತ್ತು ಶಾಂತತೆಯಿಂದ ತುಂಬಿಕೊಳ್ಳಿ ನಂತರ ಮಕ್ಕಳಿಗೆ ಕಥೆ ಹೇಳುತ್ತಾ ಹೋದರೆ ಮಕ್ಕಳಿಗೆ ಚೆನ್ನಾಗಿ ಮನಮುಟ್ಟುತ್ತದೆ ಮತ್ತು ಅವರ ಮುಗ್ದ ಮನಸ್ಸಿನಲ್ಲಿ ಆ ಕಥೆಯಲ್ಲಿರುವ ನೀತಿಯು ಅಚ್ಚು ಒತ್ತುತ್ತದೆ. ಪ್ರತಿದಿನ ಅರ್ಧಗಂಟೆಯಾದರೂ ಮಕ್ಕಳೊಡನೆ ಕಳೆದು ಅವರ ಆಸಕ್ತಿಯ ಯಾವುದಾದರೂ ವಿಷಯವನ್ನು ಓದಿ ಹೇಳುವುದರಿಂದ ಅವರ ಭಾಷೆಯು ಉತ್ತಮವಾಗುತ್ತದೆ. ಆದಷ್ಟು ನಮ್ಮ ಮಾತೃಭಾಷೆಯನ್ನು ಉಪಯೋಗಿಸಿ ಇದರಿಂದ ಮಕ್ಕಳಿಗೆ ಸ್ಪಷ್ಟವಾಗಿ ಅರ್ಥವಾಗಿ ಪುಟ್ಟಮಕ್ಕಳ ಮನಸ್ಸಿನಲ್ಲಿ ದಿಟ, ನಿಷ್ಠೆ ಮತ್ತು ಆಸಕ್ತಿಯ ಭಾವ ಹೆಚ್ಚಿಸುತ್ತದೆ. ಕಥೆ ಚಿಕ್ಕದಾಗಿ ಚೊಕ್ಕವಾಗಿರಲಿ, ದೊಡ್ಡದಾದರೆ ಮಕ್ಕಳು ಆಸಕ್ತಿ ಕಳೆದುಕೊಳ್ಳುವುದುಂಟು. ಸರಿಯಾದ ಕಥೆಯನ್ನು ಆಯ್ಕೆ ಮಾಡುವಾಗ ಮಕ್ಕಳ ವಯಸ್ಸು ಗಮನದಲ್ಲಿರಲಿ. ಅದಕ್ಕೆ ತಕ್ಕಂತೆ ಆಯ್ಕೆ ಮಾಡುವ ಜೊತೆಗೆ ಉದ್ದೇ‍ಶ ಕೂಡ ಮುಖ್ಯವಾಗುತ್ತದೆ. ಮಕ್ಕಳನ್ನು ತಿದ್ದಲು, ನಾಯಕತ್ವ ಬೆಳೆಸಲು, ವಿಶ್ವಾಸವನ್ನು ಪ್ರೇರೆಪಿಸಲು, ನೈತಿಕ ಮನೋಭಾವ ಮೈಗೂಡಿಸಲು ಅಥವಾ ಮಗುವನ್ನು ಸಾಂತ್ವನಗೊಳಿಸಲು ಕೂಡ ಉದ್ದೇಶವಾಗಿರಬಹುದು. ಕಥೆಯಲ್ಲಿ ಆದಷ್ಟು ಸುತ್ತಮುತ್ತಲಿನ ವಾತವರಣವನ್ನು ವಿವರಿಸಿ ಅಂದರೆ ಪ್ರಕೃತಿಯನ್ನು ವರ್ಣಿಸುವುದಾಗಲಿ, ಋತುಗಳ ವಿವರಣೆ, ಬಣ್ಣ, ಸುವಾಸನೆ, ಹೀಗೆ ವರ್ಣಿಸುತ್ತಾ ಹೋದಂತೆ ಅವರಿಗೆ ಕಲ್ಪನಾ ಶಕ್ತಿ ಹುಟ್ಟಿ ಜೀವನದ ಬಗ್ಗೆ ಕುತೂಹಲ ಹಾಗೂ ಅದನ್ನು ಸಕರಾತ್ಮಕವಾಗಿ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ. ಮುಖಭಾವದಲ್ಲೇ ನಗು, ಅಳು, ಕೋಪ, ಬೇಸರ, ಹೀಗೆ ಅಭಿನಯ ಮಾಡುತ್ತಾ ಕಥೆ ಹೇಳಿದರೆ ಮಕ್ಕಳಲ್ಲಿ ಇನ್ನಷ್ಟು ಕುತೂಹಲ ಹುಟ್ಟಿಸಿ ಅವರು ಮನಸ್ಸು ಅಲ್ಲಿಲ್ಲಿ ಅಡ್ಡಾಡದೇ ಏಕಾಗ್ರತೆಯಿಂದ ಕುಳಿತು ಕೇಳುತ್ತಾರೆ. ನೀವು ಈ ಕಲೆಯಲ್ಲಿ ಮುಂದುವರೆದು ಹಾಡು, ಸಂಗೀತ, ಹಾಸ್ಯ, ಅಭಿನಯ ಕೂಡ ಸೇರಿಸಬಹುದು.

 

ಕಥೆ ಹೇಳುವುದರಿಂದ ಮಕ್ಕಳಿಗೆ ಏನು ಉಪಯೋಗವಾಗಬಹುದು?

  • ಮುಂದೆ ಕಥೆಗಳನ್ನುಸ್ವ-ಇಚ್ಛೆಯಿಂದ ಖುದ್ದಾಗಿ ಓದಬಹುದು. ಇದರಿಂದ ಓದುವ ಹವ್ಯಾಸ ಬೆಳೆಯುತ್ತದೆ. ಅವರು ಭಾಷೆ ಮೇಲಿನ ಹಿಡಿತ ಸಾಧಿಸಬಹುದು.
  • ಚೆನ್ನಾಗಿ ಓದಬಲ್ಲ ಮಕ್ಕಳು ಆತ್ಮವಿಶ್ವಾಸ ಮಟ್ಟವನ್ನು ಹೊಂದುವ ಸಾಧ್ಯತೆ ಹೆಚ್ಚು. ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಅವರಿಗೆ ಸಾಧ್ಯವಾಗುತ್ತದೆ.
  • ಕಥೆಗಳು ಮಗುವಿನ ಭಾಷೆಯಲ್ಲಿ ಹೊಸ ಪದಗಳು ಮತ್ತು ಆಲೋಚನೆಗಳನ್ನು ಪರಿಚಯಿಸುವ ಅತ್ಯುತ್ತಮ ಮಾರ್ಗವಾಗಿದೆ.ಚಿಕ್ಕ ವಯಸ್ಸಿನವರಿಗೆ ಚಿತ್ರ ಪುಸ್ತಕಗಳಿಂದ ಪ್ರಾರಂಭಿಸಿ, ಹದಿಹರೆಯದವರಿಗೆ ಹೆಚ್ಚು ಸಂಕೀರ್ಣವಾದ ಕಾದಂಬರಿಗಳವರೆಗೆ ಕೆಲಸ ಮಾಡುತ್ತದೆ. ಆಕಾರ, ಗಾತ್ರ, ಸ್ಥಳ ಮತ್ತು ಬಣ್ಣ, ಸಂಖ್ಯೆಗಳು ಮತ್ತು ವಸ್ತುಗಳ ಹೆಸರುಗಳಂತಹ ಪರಿಕಲ್ಪನೆಗಳ ಬಗ್ಗೆ ತಿಳಿಯಲು ಕಥೆಗಳು ಮಕ್ಕಳಿಗೆ ಸಹಾಯ ಮಾಡುತ್ತವೆ. ದೈನಂದಿನ ಕಾರ್ಯಗಳ ಬಗ್ಗೆ ಮಕ್ಕಳಿಗೆ ಕಲಿಸಬಹುದು.
  • ಉದಾರತೆಯ ಮನೋಭಾವ, ಸಹಾನುಭೂತಿಯಂತಹ ಹೆಚ್ಚು ಸಂಕೀರ್ಣವಾದ ವಿಚಾರಗಳನ್ನು ಕಲಿಸಲು ಕಥೆಗಳು ಸಹಾಯ ಮಾಡುತ್ತದೆ. ಒಟ್ಟಾರೆ ಹೇಳುವುದಾದರೆ ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಕಥೆಗಳು ಉಪಯುಕ್ತವಾಗುತ್ತದೆ.
  • ಕಥೆಗಳನ್ನು ಓದುವುದು ವಿಶ್ರಾಂತಿಗೆ ಸಹಾಯ ಮಾಡುತ್ತದೆ, ಉದಾಹರಣೆಗೆ ಮಲಗುವ ಮುನ್ನ. ಅವರು ಮಕ್ಕಳಿಗೆ ದಿನದ ಒತ್ತಡಗಳನ್ನು ಮರೆತು ಸ್ವಲ್ಪ ಸಮಯದವರೆಗೆ ಫ್ಯಾಂಟಸಿಯಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ತಮ್ಮ ಪೋಷಕರ ಜೊತೆ ಕಾಲ ಕಳೆಯಲು ಇದೊಂದು ಅವಕಾಶ ಮತ್ತು ಅವರಲ್ಲಿ ಸುರಕ್ಷತಾ ಭಾವನೆ ಮೂಡಿಸುತ್ತದೆ.
  • ಕಥೆಗಳು ತಮ್ಮ ಜಗತ್ತಿನಲ್ಲಿ ಹೊಸ ಆಲೋಚನೆಗಳನ್ನು ಪರಿಚಯಿಸುವ ಮೂಲಕ ಮಗುವಿನ ಕಲ್ಪನೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತವೆ – ಅದ್ಭುತ ಪ್ರಪಂಚ, ಇತರ ಗ್ರಹಗಳು, ಸಮಯದ ವಿಭಿನ್ನ ಅಂಶಗಳು ಮತ್ತು ಆವಿಷ್ಕರಿಸಿದ ಪಾತ್ರಗಳ ಬಗ್ಗೆ ಕಲ್ಪನೆಗಳು, ಇದು ಮಕ್ಕಳಿಗೆ ತಮಗೆ ಬೇಕಾದುದನ್ನು ಕಲ್ಪಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ.
  • ಮಕ್ಕಳು ಭಾವನೆಗಳನ್ನು ಒಳಗೊಂಡಿರುವ ಕಥೆಗಳನ್ನು ಓದಿದಾಗ ಅದು ಅವರ ಸ್ವಂತ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸ್ವೀಕರಿಸಲು ಸಹಾಯ ಮಾಡುತ್ತದೆ. ಅದೇ ರೀತಿ ಭಾವಿಸುವ ಇತರ ಮಕ್ಕಳಿದ್ದಾರೆ ತಾನು ಒಬ್ಬಂಟಿಯಲ್ಲ ಎಂದು ಅರ್ಥಮಾಡಿಕೊಳ್ಳಲು ಇದು ಅವರಿಗೆ ಸಹಾಯ ಮಾಡುತ್ತದೆ. ಭಾವನೆಗಳು ಸಾಮಾನ್ಯ ಭಾವಗಳನ್ನು ವ್ಯಕ್ತಪಡಿಸಬೇಕು ಎಂದು ಮಗುವಿಗೆ ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಕಥೆಯಲ್ಲಿನ ಪಾತ್ರಕ್ಕೆ ಮಗು ಹೇಗೆ ಪ್ರತಿಕ್ರಿಯಿಸುತ್ತದೆ ಉದಾಹರಣೆಗೆ ದುಃಖ ಅಥವಾ ಭಯ, ಮಗು ಹೇಗೆ ಯೋಚಿಸುತ್ತದೆ ಎಂಬುದನ್ನು ಅರಿಯಲು ಸಹಾಯ ಮಾಡುತ್ತದೆ.
  • ಈ ಪ್ರಕ್ರಿಯೆಯಲ್ಲಿ ನೀವು ಸಹ ಭಾಗಿಯಾಗುವುದರಿಂದ ನೀವು ಕೂಡ ಮಕ್ಕಳೊಂದಿಗೆ ಮಕ್ಕಳಾಗಿ ನಿಮ್ಮ ಜೀವನದ ಎಲ್ಲಾ ಒತ್ತಡಗಳನ್ನು ಮರೆಯಬಹುದು ಮತ್ತು ನಿಮ್ಮಲ್ಲಿ ಇರುವ ಸಕರಾತ್ಮಕ ಗುಣಗಳು ಹೊರಬರಬಹುದು ಮತ್ತು ನಿಮ್ಮಲ್ಲಿ ತೃಪ್ತಿಯ ಭಾವವನ್ನು ತರುವಲ್ಲಿ ಈ ಕಥೆ ಹೇಳುವ ಕಲೆ ಸಹಾಯ ಮಾಡುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಇದು ಒಂದು ಉತ್ತಮ ಮೋಜಿನ ಸಂಗತಿ.

Leave a Reply

Your email address will not be published. Required fields are marked *