June 30, 2020

ಭಾರತದಲ್ಲಿ ಸಾಂಕ್ರಾಮಿಕ ರೋಗಗಳಿಗೆ ದೇವರು

Share This

ಇತ್ತೀಚಿನ ದೊಡ್ಡ ಸುದ್ದಿ ಎಂದರೆ ಕೇರಳದ ಕೊಲ್ಲಂ ಜಿಲ್ಲೆಯ ಕಡಕ್ಕಲ್‌ನಲ್ಲಿರುವ ದೇವಾಲಯದ ಅರ್ಚಕ ಅನಿಲನ್ ಅವರು ಕರೋನಾ ದೇವಿಗೆ ದೈನಂದಿನ ಪ್ರಾರ್ಥನೆ ಸಲ್ಲಿಸುತ್ತಿರುವುದು. ಜನರಿಗಾಗಿ ಮತ್ತು ಕರೋನಾ ವಾರಿಯರ್ಸ್ ಅವರ ಯೋಗಕ್ಷೇಮಕ್ಕಾಗಿ ಕರೋನಾ ದೇವಿಯನ್ನು ಪೂಜೆ ಮಾಡುತ್ತಿದ್ದಾರೆ.  ಇದೇ ರೀತಿ ಉತ್ತರ ಅಸ್ಸಾಂನ ಬಿಸ್ವಾನಾಥ್ ಜಿಲ್ಲೆಯ ಒಂದು ಹಳ್ಳಿಯಲ್ಲಿ ಮಹಿಳೆಯರ ಗುಂಪು ಇತ್ತೀಚೆಗೆ ‘ಕರೋನಾ ಮಾ’ಗೆ ಪೂಜೆ ಸಲ್ಲಿಸಲು ನದಿಯ ದಡದಲ್ಲಿ ಜಮಾಯಿಸಿತ್ತು. ಹಾಗೆಯೇ ‘ಕರೋನಾ ಮಾ’ಗೆ ಪ್ರಾರ್ಥನೆ ಸಲ್ಲಿಸುವ ಮಹಿಳೆಯರ ಚಿತ್ರಗಳೂ ಜಾರ್ಖಂಡ್‌ನ ಸಿಂಧ್ರಿ ಮತ್ತು ಬೊಕಾರೊಗಳಿಂದ ಹೊರಹೊಮ್ಮಿವೆ. ಈ ಕೋವಿಡ್-19 ಸಮಯದಲ್ಲೂ ಸಹ ಜನರು ದೇವರ ಮೊರೆ ಹೋಗುತ್ತಿರುವುದು ಸುದ್ದಿಯಾಗಿದೆ. ಈ ಸುದ್ದಿಗಳನ್ನು ಮಾಧ್ಯಮದವರು ಬಿತ್ತರಿಸಿದ್ದಾಗ ಸಾಮಾಜಿಕ  ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಯಿತು.

ಈ ರೀತಿಯ ಸುದ್ದಿಗಳು ಭಾರತದಲ್ಲಿ ಹೊಸದೇನಲ್ಲ. ನಮಗೆ ಗೊತ್ತಿರುವಂತೆ ನಮ್ಮ ಸುತ್ತಮುತ್ತಲಿನಲ್ಲಿಯೇ ವಿವಿಧ ರೋಗಗಳಿಗೆ ವಿವಿಧ ದೇವಸ್ಥಾನಗಳು ಹುಟ್ಟಿಕೊಂಡಿರುವುದು ನೋಡಿದ್ದೇವೆ. ಆಗಾದರೆ, ಇಂತಹ ಘಟನೆಗಳು ಇತ್ತೀಚಿಗೆ ಪ್ರಚಲಿತವಾಗಿದೆ ಎಂದಲ್ಲ… ಹಲವಾರು ಶತಮಾನಗಳಿಂದ ಸಂಕ್ರಮಿಕ ರೋಗಗಳಿಗೆ ಹಲವಾರು ದೇವತೆಗಳು ಸೃಷ್ಟಿಗೊಂಡಿರುವುದನ್ನು ನಾವು ಇಲ್ಲಿ ವಿವರಿಸಲು ಪ್ರಯತ್ನಿಸಿದ್ದೇವೆ.

ಭಯದಲ್ಲಿ ಧರ್ಮವನ್ನು ಆಶ್ರಯಿಸುವುದು ಮಾನವನ ಸ್ವಾಭಾವಿಕ ಪ್ರತಿಕ್ರಿಯೆಯಾಗಿದ್ದರೂ, ವೈಜ್ಞಾನಿಕ ಹಸ್ತಕ್ಷೇಪವು ಅದನ್ನು ಅಳಿಸಲು ಪ್ರಾರಂಭಿಸಿದೆ. ಪ್ರಾಚೀನ ಕಾಲದಿಂದಲೂ, ಭಾರತದಲ್ಲಿ ಸಂಕಷ್ಟದ ಸಮಯದಲ್ಲಿ ದೇವರ ಮೊರೆ ಹೋಗಿ ಅವನಲ್ಲಿ ನಂಬಿಕೆ ಇಟ್ಟು ಪರಿಹರಿಸಲು ಆಶ್ರಯಿಸುವುದು ಸಾಮಾನ್ಯ. ಭಾರತದಲ್ಲಿ ರೋಗಗಳ ಭಯದ ಕಾರಣದಿಂದ, ರೋಗಗಳನ್ನು ನಿವಾರಿಸಲು ಹರಿತ ದೇವತೆ, ಸೀತಾಲ, ಓಲಾ ಬೀಬಿ ಯಂತಹ ದೇವತೆಗಳನ್ನು ಪೂಜಿಸುವುದು ಪ್ರಚಲಿತವಾಗಿದೆ. ಚರ್ಮ ರೋಗಗಳ ದೇವರಾದ ಘೆಂಟು-ಡಿಬಾಟಾ ಮತ್ತು ರಕ್ತ ಸೋಂಕಿನ ದೇವತೆಯಾದ ರಕ್ತಬತಿ ಇನ್ನೂ ಹಲವಾರು ದೇವತೆಗಳು ಸೇರಿದ್ದಾರೆ.

ಹರಿತಿ: ಸಿಡುಬು ರೋಗದಿಂದ ಮಕ್ಕಳನ್ನು ರಕ್ಷಿಸುವ ಬೌದ್ಧ ದೇವತೆ

ಕ್ರಿಶ್ಚಿಯನ್ ಯುಗದ ಆರಂಭದ ದಿನಗಳಲ್ಲಿ ಕುಶಾನ ರಾಜವಂಶಸ್ಥರು ಆಳಿದ ಪ್ರದೇಶಗಳಲ್ಲಿ ಹರಿತಿ ಎಂಬ ದೇವತೆಯ ಹಲವಾರು ಪ್ರತಿಮೆಗಳನ್ನು ಕಾಣಬಹುದು. ಆ ಸ್ಥಳಗಳಲ್ಲಿ ಹರಿತಿಯು ತನ್ನ ಮಕ್ಕಳೊಂದಿಗಿರುವ ವಿಗ್ರಹಗಳನ್ನು ಉತ್ಖನನ ಮಾಡಲಾಗಿದೆ. ಕುಶಾನರು ಇಂಡೋ-ಗ್ರೀಕ್ ಸಾಮ್ರಾಜ್ಯದಿಂದ ಆನುವಂಶಿಕವಾಗಿ ಗ್ರೇಕೋ-ಬೌದ್ಧ ಧರ್ಮವನ್ನು ಪಡೆದಿದ್ದರು, ಈ ಕಾರಣದಿಂದಲೇ ಬೌದ್ಧ ಸಂಪ್ರದಾಯದಲ್ಲಿ ಹರಿತಿಯ ಜನಪ್ರಿಯತೆಯನ್ನು ನಾವು ಕಾಣಬಹುದು.ಕ್ರಿ.ಪೂ ಐದನೇ ಶತಮಾನದಲ್ಲಿ ವಿಶ್ವದ ಮೊದಲ ಸಿಡುಬು ರೋಗ ಏಕಾಏಕಿ ಯುರೋಪಿನಲ್ಲಿ ಸಂಭವಿಸುತ್ತದೆ. ಇದು ಭಾರತದಲ್ಲಿ ಯಾವಾಗ ಹರಡಿತೋ ಹೇಳುವುದು ಕಷ್ಟ, ಆದರೆ  ಆರನೇ ಮತ್ತು ಏಳನೇ ಶತಮಾನದಲ್ಲಿ ಭಾರತಕ್ಕೆ ಐಸಿಂಗ್ ಮತ್ತು ಕ್ಸುವಾನ್‌ಜಾಂಗ್‌ ಎಂಬ ಚೀನಾ ಪ್ರವಾಸಿಗರ ದಾಖಲೆಗಳು, ಉಪ-ಖಂಡದ  ಬೌದ್ಧ ಮಠಗಳದಾದ್ಯಂತ ಹರಿತಿ ಪ್ರತಿಮೆಗಳ ಜನಪ್ರಿಯತೆಯನ್ನು ತೋರಿಸುತ್ತದೆ.

ಸಿಡುಬು ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುವ ರೋಗವೆಂದು ಪರಿಗಣಿಸಲ್ಪಟ್ಟಿದ್ದರಿಂದ, ಮಕ್ಕಳ ಒಟ್ಟಾರೆ ಯೋಗಕ್ಷೇಮ, ಹೆರಿಗೆ, ಫಲವತ್ತತೆ ಮತ್ತು ಮಕ್ಕಳ ಮೇಲೆ ಬಾಧಿಸುವ ಕಾಯಿಲೆಗಳನ್ನು ನಿವಾರಿಸಲು ಹರಿತಿಯನ್ನು ಪೂಜಿಸಲಾಗುತ್ತಿತ್ತು. ಆದಾಗ್ಯೂ, ಗ್ರಾಮೀಣ ಮತ್ತು ಬುಡಕಟ್ಟು ಜಾನಪದ ಕಥೆಗಳಿಂದ ಹರಿತಿಯನ್ನು ಬೌದ್ಧ ಸಂಪ್ರದಾಯಕ್ಕೆ ಪರಿಚಯಿಸಲಾಯಿತು ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇತಿಹಾಸಕಾರರಾದ ಶ್ರೀ ಪದ್ಮಾರವರ ಕೃತಿಯಲ್ಲಿ ಸಿಡುಬು ದೇವತೆಗಳನ್ನು ಮೊದಲಿನಿಂದಲೂ ಪೂಜಿಸಲಾಗುತ್ತಿತ್ತು ಹಾಗೂ ಆಂಧ್ರಪ್ರದೇಶದಲ್ಲಿ ಹರಿತಿ ದೇವಿಯು ಜಾನಪದ ಮೂಲವನ್ನು ಹೊಂದಿದ್ದು, ಅಲ್ಲಿ ಅವಳು ದೇವತೆ ಎರುಕಮ್ಮ ಎಂದು ಕರೆಯಲ್ಪಡುತ್ತಿದ್ದಳು ಎಂದು ತಿಳಿಸಿದ್ದಾರೆ. ಆಂಧ್ರದಲ್ಲಿ ಸಿಡುಬು ಮತ್ತು ಇತರ ಸಾಂಕ್ರಾಮಿಕ ಕಾಯಿಲೆಗಳ ದೇವತೆಗಳಿಗೆ  ಮುತ್ಯಲಮ್ಮ, ಪೋಚಮ್ಮ, ಪೆದ್ದಮ್ಮ, ನುಕಲಮ್ಮ, ಅಂಕಲಮ್ಮ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತಿತ್ತು. ಈ ದೇವತೆಗಳ ಹೆಸರು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗಬಹುದು. ಗರ್ಭಧಾರಣೆ ಅಥವಾ  ಹೆರಿಗೆಯಾಗುವ ಸಮಯದಲ್ಲಿ ಮರಣ ಹೊಂದಿದ ಮಹಿಳೆಯರ ಆತ್ಮಗಳು ಸಿಡುಬು ದೇವತೆಗಳಾಗಿ ಪರಿವರ್ತಿತಗೊಂಡು ಸರಿಯಾಗಿ ಪೂಜಾರ್ಪಣೆ ಮತ್ತು ಪ್ರಾರ್ಥನೆ ಸಲ್ಲಿಸಿದಿದ್ದರೆ ತಮ್ಮ ಮಕ್ಕಳಿಗೆ ವಿನಾಶ ಮತ್ತು ಮರಣವನ್ನು ತರುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿತ್ತು

ಬೆಲ್ಜಿಯಂನ ಪಾದ್ರಿ ಮತ್ತು ಬೌದ್ಧ ಧರ್ಮದ ವಿದ್ವಾಂಸ ಎಂಟಿಯೆನ್ ಲಮೊಟ್ಟ್ ತಮ್ಮ 1988 ರ ಪುಸ್ತಕ ‘ಹಿಸ್ಟರಿ ಆಫ್ ಇಂಡಿಯನ್ ಬುದ್ಧಿಸಮ್’ ನಲ್ಲಿ, ಸಿಡುಬು ಗುಣಪಡಿಸುವ ದೇವತೆಯನ್ನು ನೇಪಾಳದಲ್ಲಿ ಅವಳನ್ನು ಆಹ್ವಾನಿಸಿ ಸನ್ಯಾಸಿಗಳು ದೈನಂದಿನ ಪೋಷಣೆಯನ್ನು ಮಾಡುತ್ತಾರೆ ಎಂದೂ, ಹರಿತಿಯ ಚಿತ್ರಗಳು ಅತ್ಯಂತ ಪ್ರಸಿದ್ಧಿ ಹೊಂದಿದ್ದು, ಪೇಶಾವರದಲ್ಲಿ ಅವಳ ಸ್ತಂಭವನ್ನು ಒಂದು ಶಾಸನದೊಂದಿಗೆ ಕೆತ್ತಲಾಗಿದೆ. ಅವಳು ಕೈಯಲ್ಲಿ ನಿಂತಿರುವ ಮಗುವನ್ನು ಮತ್ತು ಇತರ ಇಬ್ಬರು ಹೆಗಲ ಮೇಲೆ ಹೊತ್ತುಕೊಂಡಿರುವ, ಸಿಡುಬು ಆಕಾಶಕ್ಕೆ ಕೊಂಡೊಯ್ಯುವಂತೆ ದೇವಿಯನ್ನು ಬೇಡಿಕೊಂಡಂತೆ ಕೆತ್ತಲಾಗಿದೆ ಎಂದು ಅವರು ಹೇಳಿರುತ್ತಾರೆ.

 

ಸೀತಾಲ: ಸಿಡುಬಿನ ತಂಪಾಗಿಸುವ ದೇವತೆ

19 ನೇ ಶತಮಾನದಲ್ಲಿ, ಬ್ರಿಟಿಷ್ ವೈದ್ಯರು ಭಾರತದಲ್ಲಿ ಸಿಡುಬು ರೋಗವನ್ನು ಎಲ್ಲಾ ಸಾಂಕ್ರಾಮಿಕ ಕಾಯಿಲೆಗಳಿಗಿಂತ ಹೆಚ್ಚು ವಿನಾಶಕಾರಿ ಎಂದು ಗುರುತಿಸಿದ್ದರು. ಸಿಡುಬು ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿಯೇ ಹಲವಾರು ಮಿಲಿಯನ್ ಜನರ ಸಾವಿಗೆ ಕಾರಣವಾಯಿತು ಎಂದಿದ್ದಾರೆ.

ಅಂತೆಯೇ, ಮತ್ತೊಬ್ಬ ದೇವತೆಯಾದ ‘ಸೀತಾಲ’ ಅಥವಾ ‘ಮಾತಾ’(ತಾಯಿ) ಹಿಂದೂ ದೇವತೆ ದುರ್ಗೆಯ  ಅವತಾರವೆಂದು ನಂಬಲಾಗಿದೆ, ಸಿಡುಬು ಗುಣಪಡಿಸುವ ದೇವತೆಯಾಗಿ ಬಂಗಾಳ ಮತ್ತು ಉತ್ತರ ಭಾರತದಲ್ಲಿ ವ್ಯಾಪಕವಾಗಿ ಪೂಜಿಸಲ್ಪಟ್ಟವಳು. ಭಾರತೀಯ ಜಾನಪದ ಕಥೆಗಳಲ್ಲಿ ಸಿಡುಬು ದೇವತೆಗಳ ಹಲವಾರು  ದೇವತೆಗಳಿದ್ದರೂ, ಸೀತಾಲಾ ವಿಶೇಷ ಸ್ಥಾನವನ್ನು ಹೊಂದಿದ್ದಾಳೆ. ವಿಶೇಷವೆಂದರೆ ಸಿಡುಬು ಅವಳ ವ್ಯಕ್ತಿತ್ವದ ಅಭಿವ್ಯಕ್ತಿಯನ್ನು ತೋರಿಸುತ್ತದೆ. ದೇಹಕ್ಕೆ ಅವಳ ಪ್ರವೇಶವಾದರೆ ಸುಡುವ ಜ್ವರ ಮತ್ತು ಗುಳ್ಳೆಗಳಿಂದ ಭಾಧಿಸಲ್ಪಡುತ್ತಾರೆ. ಇಲ್ಲಿ ರೋಗಕ್ಕೆ ಚಿಕಿತ್ಸೆಗಿಂತ ಅದರದೇ ವೈಶಿಷ್ಟತೆಯಿರುವ ಧಾರ್ಮಿಕ ಆಚರಣೆಯನ್ನು ಮಾಡುತ್ತಾರೆ. ಸಿಡುಬಿಗಾಗಿ ಯಾವುದೇ ರೀತಿಯ ರೋಗನಿರೋಧಕ ಅಥವಾ ಚಿಕಿತ್ಸೆಯನ್ನು ಪಡೆಯುವುದು ಅಪ್ರಸ್ತುತ, ಹಾಗೇನಾದರೂ, ಇದಕ್ಕೆ ವಿರುದ್ಧವಾಗಿ ನಡೆದರೆ, ದೇವಿಯನ್ನು ಪ್ರಚೋದಿಸಿದಂತಾಗಿ ಬಳಲುತ್ತಿರುವ ರೋಗಿಯನ್ನು ಮತ್ತಷ್ಟು ದುರ್ಬಲಗೊಳಿಸುತ್ತಾಳೆ ಆ ದೇವಿ ಎಂದು ಅವಳ ಭಕ್ತರು ಭಯ-ಭಕ್ತಿಯಿಂದ ಪೂಜಿಸುತ್ತಾರೆ.

ಸೀತಾಲ, ಅಂದರೆ ‘ತಂಪು ಎಂದರ್ಥ. ಮೊಸರು, ಬಾಳೆಹಣ್ಣು, ತಣ್ಣನೆಯ ಅಕ್ಕಿ ಮತ್ತು ಸಿಹಿತಿಂಡಿಗಳಂತಹ ತಂಪಾಗಿಸುವ ಪದಾರ್ಥಗಳನ್ನು ಸಮರ್ಪಿಸಿ ದೇವಿಯನ್ನು ಸಮಾಧಾನಗೊಳಿಸಲಾಗುತ್ತದೆ. ಅದೇ ರೀತಿ, ಸಿಡುಬುನಿಂದ ಬಳಲುತ್ತಿರುವ ರೋಗಿಗೆ ತಂಪಾಗಿಸುವ ಪಾನೀಯಗಳನ್ನು ನೀಡಿ ದೇವಿಯ ವಾಸಸ್ಥಾನವೆಂದು ನಂಬಿ ನೀಡಲಾಗುತ್ತದೆ ಮತ್ತು ಅವನ ಅಥವಾ ಅವಳ ಜ್ವರ ದೇಹವನ್ನು ತಣ್ಣೀರಿನಿಂದ ತೊಳೆದು ಬೇವಿನ ಎಲೆಗಳಿಂದ ತಯಾರಿಸಿದ ಲೇಪನ ಹಚ್ಚಿ, ಒದ್ದೆಯಾದ ಬೇವಿನ ಎಲೆಗಳ ಮೇಲೆ ಮಲಗಿಸಿ ದೇಹವನ್ನು ಶೀತಲಗೊಳಿಸುತ್ತಾರೆ. 1970 ನಂತರ ಸಿಡುಬು ನಿರ್ಮೂಲನೆಯಾಗಿದ್ದರೂ, ಭಾರತದಲ್ಲಿ ಈಗಲೂ ಸಹ ಸೀತಾಲಾ ದೇವಿ ದೇಶದ ಅನೇಕ ಭಾಗಗಳಲ್ಲಿ ಪೂಜ್ಯನೀಯಳಾಗಿ ಭಾವಿಸುತ್ತಾರೆ ಎಂಬುದು ಗಮನ ಸೆಳೆಯುವ ಸಂಗತಿ.

 

ಓಲಾ ಚಾಂಡಿ / ಬೀಬಿ: ಕಾಲರಾ ದೇವತೆ

19 ನೇ ಶತಮಾನದ ಭಾರತದ ಮತ್ತೊಂದು ಮಾರಕ ಸಾಂಕ್ರಾಮಿಕವೆಂದರೆ ಕಾಲರಾ. ಕ್ರಿ.ಪೂ ನಾಲ್ಕನೇ ಶತಮಾನದ ಹಿಂದೂಗಳು, ಅರಬ್ಬರು, ಚೈನೀಸ್, ಗ್ರೀಕರು ಮತ್ತು ರೋಮನ್ನರ ಪ್ರಾಚೀನ ವೈದ್ಯಕೀಯಕೃತಿಗಳಲ್ಲಿ ಕಾಲರಾ ಬಗ್ಗೆ ಉಲ್ಲೇಖಗಳು ಕಂಡುಬರುತ್ತದೆಯಾದರೂ, ಹತ್ತೊಂಬತ್ತನೇ ಶತಮಾನದಲ್ಲಿ ಈ ರೋಗವು ಸಂಪೂರ್ಣ ಹೊಸ ಸ್ಥಾನಮಾನವನ್ನು ಪಡೆದುಕೊಂಡಿತು, ಒಟ್ಟು ಐದು ಸಲ ಕಾಲರಾ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು.

ಅರ್ನಾಲ್ಡ್ ಅವರ ಪುಸ್ತಕದಲ್ಲಿ ಉಲ್ಲೇಖಿಸಲಾದ ಯುರೋಪಿಯನ್ ಮಿಷನರಿಗಳ ವರದಿಗಳಲ್ಲಿ,  ಕಾಲರಾ ದೇವತೆಯ ಆಚರಣೆಯು 1817 ರ ಸಾಂಕ್ರಾಮಿಕ ರೋಗದ ನಂತರ ಪ್ರಾರಂಭವಾಯಿತು ಎಂದೂ, ಈ ಕಾಲರಾ ದೇವತೆಯನ್ನು ಹೆಚ್ಚಾಗಿ ಬಂಗಾಳದಲ್ಲಿ, ಮುಸ್ಲಿಮರು ಓಲಾ ಬೀಬಿಯಾಗಿ ಮತ್ತು ಹಿಂದೂಗಳು ಒಲೈ-ಚಾಂಡಿಯಾಗಿ ಆರಾಧಿಸಲಾಗುತ್ತದೆ ಎಂದು ವಿವರಿಸಿದ್ದಾರೆ. 1817ರ ಮೊದಲು ಈ ದೇವಿಯು ಸೀತಾಲಾಕ್ಕಿಂತ ಕಡಿಮೆ ಜನಪ್ರಿಯಳಾಗಿದ್ದರೂ, ಆದಾಗ್ಯೂ, ಕಾಲರಾ ಹೆಚ್ಚು ಪ್ರಚಲಿತದಲ್ಲಿದ್ದಾಗ ವ್ಯಾಪಕವಾಗಿ ಉತ್ತೇಜಿಸಲ್ಪಟ್ಟಳು. ಈ ದೇವತೆಯು ಚಿಕ್ಕ ವಯಸ್ಸಿನ ಹುಡುಗಿಯರು/ಯುವತಿಯರು ಮೇಲಿನ ಗೌರವದಿಂದಾಗಿ ಓಲಾ ಬೀಬಿ / ಚಾಂಡಿ ಅವರ ಆರಾಧನೆಯನ್ನು ಸ್ವೀಕರಿಸಲು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಾಳೆ ಎಂದು ವಿವರಿಸಿದ್ದಾರೆ. ಬಂಗಾಳದಲ್ಲದೇ, ರಾಜಸ್ಥಾನದಲ್ಲಿಯೂ ಸಹ ತನ್ನ ಭಕ್ತರನ್ನು ಕಾಲರಾ, ಕಾಮಾಲೆ, ಅತಿಸಾರ ಮತ್ತು ಹೊಟ್ಟೆಗೆ ಸಂಬಂಧಿಸಿದ ಇತರ ಕಾಯಿಲೆಗಳಿಂದ ರಕ್ಷಿಸುವ ದೇವತೆಯಾಗಿಯೂ ಪೂಜಿಸಲ್ಪಡುತ್ತಾಳೆ.

 

 

 

ಪ್ಲೇಗ್ ದೇವತೆಯಾದ ಪ್ಲೇಗ್ ಮಾರಮ್ಮ

ಮಾನವ ಇತಿಹಾಸದಲ್ಲಿ ಮೊದಲ ಪ್ಲೇಗ್ ಅನ್ನು ಕ್ರಿ.ಶ ಆರನೇ ಶತಮಾನದಲ್ಲಿ ಜಸ್ಟಿನಿಯನ್ ಪ್ಲೇಗ್ ಎಂದೂ ಕರೆಯಲಾಗಿದೆ. ಇದನ್ನು ಕೋಪಗೊಂಡ ದೇವರುಗಳ ಕಾರ್ಯವೆಂದು ಪರಿಗಣಿಸಲಾಯಿತು. 18 ನೇ ಶತಮಾನದ ಅಂತ್ಯ ಮತ್ತು 19 ನೇ ಶತಮಾನದ ಆರಂಭದಲ್ಲಿ, ಪ್ಲೇಗ್ ಸಾಂಕ್ರಾಮಿಕ ರೋಗವು ದೇಶಾದ್ಯಂತ ಹರಡಿತು, ಇದರ ಪರಿಣಾಮವಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದರು. ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದ ಅನೇಕ ಭಾಗಗಳನ್ನು ಒಳಗೊಂಡಂತೆ ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ ಪ್ಲೇಗ್ ಸಾಂಕ್ರಾಮಿಕ ರೋಗ ಹರಡಿತು. 1888ರಲ್ಲಿ ಪ್ಲೇಗ್‌ ಮಾರಿ ಬೆಂಗಳೂರಿನ ಶೇ.25ರಷ್ಟು ಜನರನ್ನು ಬಲಿತೆಗೆದುಕೊಂಡಾಗ ಕಂಗಾಲಾದ ಭಕ್ತರು ಕಟ್ಟಿದ ದೇಗುಲವೇ ತ್ಯಾಗರಾಜನಗರದ ಪ್ಲೇಗಮ್ಮನ ದೇಗುಲ. ನವರಾತ್ರಿಯ ಸಂದರ್ಭದಲ್ಲಿ ಕಾಯಿಲೆ ವಾಸಿ ಮಾಡೆಂದು ಮೊರೆ ಹೋಗುವವರು ಇಂದಿಗೂ ಕಡಿಮೆಯಿಲ್ಲ. ಈಕೆ ಹೀಲಿಂಗ್‌ ಮಾರಮ್ಮ ಎಂದೇ ಹೆಸರುವಾಸಿ. ಅಂತೆಯೇ ಪ್ಲೇಗಮ್ಮನಿಗೆಂದೇ ಮೀಸಲಾದ ದೇಗುಲಗಳನ್ನು ಇಂದಿಗೂ ಬೆಂಗಳೂರಿನ ಅವೆನ್ಯೂ ರಸ್ತೆ, ಚಿಕ್ಕಪೇಟೆ, ಬಳೆಪೇಟೆ ಮತ್ತಿತರ ಸ್ಥಳಗಳಲ್ಲಿ ನೋಡಬಹುದು. ಲಾಲ್‌ಬಾಗ್‌ ಸಮೀಪದ ಮಾವಳ್ಳಿಯಲ್ಲಿರುವ ಅಶ್ವತ್ಥ ಕಟ್ಟೆಯ ಕೆಳಗಿರುವ ಬಿಸಿಲು ಮಾರಮ್ಮನ  ಗುಡಿ ಸಹ ಪ್ಲೇಗ್‌ ಮಾರಮ್ಮ ಎಂತಲೇ ಹೆಸರುವಾಸಿ. ಇಂದಿಗೂ ಸುತ್ತಮುತ್ತಲ ಜನರಿಗೆ ಕಾಯಿಲೆ ಕಸಾಲೆ ಬಂದರೆ ಬಿಸಿಲು ಮಾರಮ್ಮನಿಗೆ ಹರಕೆ ಹೊತ್ತುಕೊಳ್ಳುವ ಪದ್ಧತಿಯಿದೆ.

Leave a Reply

Your email address will not be published. Required fields are marked *