ಇದು ಮೆರವಣಿಗೆಯಲ್ಲ..ಪ್ರಯಾಣ

Share This

ಇಂದು ನಾವು ಅನೇಕ ವಾಹನಗಳ ಸಹಾಯದಿಂದ ಬಹಳ ಸುಲಭವಾಗಿ ದೂರ ಪ್ರಯಾಣಿಸುತ್ತೇವೆ. ಪ್ರಯಾಣಕ್ಕಾಗಿ ಚಕ್ರರಹಿತ ಗಾಡಿಗಳ ಸಂಪ್ರದಾಯವು ಭಾರತದಲ್ಲಿ ತುಂಬಾ ಹಳೆಯದು. ಸಾಮಾನ್ಯ ಜನರು ಕಾಲ್ನಡಿಗೆ ಬಿಟ್ಟರೆ ಶ್ರೀಮಂತರು ಐಷಾರಾಮಿಯಾಗಿ ದೂರ ಪ್ರಯಾಣ ಬೆಳಸಲು ಉಪಯೋಗಿಸುತ್ತಿದ್ದ ಮಾರ್ಗವೆಂದರೆ ಪಲ್ಲಕ್ಕಿ. ಪಲ್ಲಕ್ಕಿ ಎಂಬ ಪದವು ಪಲಂಕಾ ಎಂಬ ಸಂಸ್ಕೃತ ಪದದಿಂದ ಬಂದಿದೆ ಅಂದರೆ ಹಾಸಿಗೆ ಅಥವಾ ಮಂಚ ಎಂದರ್ಥ. ಇದನ್ನು ಪಾಲ್ಕಿ ಎಂದೂ ಕರೆಯುತ್ತಾರೆ. ಪಾಲ್ಕಿ ಎನ್ನುವುದು ನಾಲ್ಕು ಕೋಲುಗಳನ್ನು ಹೊಂದಿರುವ ಮುಚ್ಚಿದ ಸೆಡಾನ್ ಕುರ್ಚಿಯಾಗಿದ್ದು ಇದನ್ನು ಇಬ್ಬರು, ನಾಲ್ವರು ಅಥವಾ ಅದಕ್ಕಿಂತ ಹೆಚ್ಚು ಪುರುಷರು ಹೆಗಲ ಮೇಲೆ ಹೊತ್ತೊಯ್ಯುತ್ತಾರೆ. ಇಂಗ್ಲೀಷಿನಲ್ಲಿ ಲಿಟರ್ ಎಂದು ಉಲ್ಲೇಖಿಸಲ್ಪಟ್ಟ ಪಾಲ್ಕಿಗಳು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿವೆ ಮತ್ತು ರಾಮಾಯಣ (ಸಿ 250 ಬಿ.ಸಿ) ದಂತಹ ಭಾರತೀಯ ಮಹಾಕಾವ್ಯಗಳಲ್ಲಿ ಉಲ್ಲೇಖಿಸಲಾಗಿದೆ.

 

ಪಾಲ್ಕಿಯು ಮರದ ಚಿಕ್ಕ ಪೆಟ್ಟಿಗೆಯಾಗಿದ್ದು ಸುಂದರವಾದ ಕೆತ್ತನೆ ಅಥವಾ ವಿನ್ಯಾಸಗಳ ವರ್ಣಚಿತ್ರಗಳಿಂದ ಅಲಂಕರಿಸಲಾಗಿರುತ್ತದೆ. ಕೆಲವು ಚಿನ್ನ ಮತ್ತು ಬೆಳ್ಳಿಯಿಂದ ಸಮೃದ್ಧವಾಗಿ ಲೇಪಿಸಲ್ಪಟ್ಟಿದ್ದರೆ ಇನ್ನೂ ಕೆಲವು ಮೆರುಗೆಣ್ಣೆ ಬಣ್ಣಗಳನ್ನು ಬಳಸಿ ಪಾಲ್ಕಿ ಅನ್ನು ಅಲಂಕರಿಸಲಾಗಿರುತ್ತದೆ. ಒಳಾಂಗಣವನ್ನು ಬ್ರೊಕೇಡ್ ಬಟ್ಟೆಯಿಂದ ಅಥವಾ ರೇಷ್ಮೆ ಹೊದಿಕೆಯಿಂದ ಮುಚ್ಚಲಾಗುತ್ತಿತ್ತು. ಸಾಮಾನ್ಯವಾಗಿ ಹತ್ತಿಯಿಂದ ತುಂಬಿದ ಅಚ್ಚುಕಟ್ಟಾದ ಹಾಸಿಗೆ ಮತ್ತು ಒಂದು ಜೋಡಿ ದಿಂಬುಗಳಿಂದ ಒದಗಿಸಲಾಗಿರುತ್ತದೆ. ವಿನ್ಯಾಸಗಳಲ್ಲಿ ಎಲೆ ಮಾದರಿಯ, ಪ್ರಾಣಿಗಳ ಅಥವಾ ಜ್ಯಾಮಿತೀಯ ವಿನ್ಯಾಸಗಳು ಸೇರಿವೆ. ಮೇಲಿನ ಚಾವಣಿಯು ಸಹ ಅಲಂಕಾರಿಕ ವಿನ್ಯಾಸಗಳನ್ನು ಹೊಂದಿರುತ್ತದೆ. ಕಿಟಕಿಯ ಕವಾಟುಗಳನ್ನು ಪಲ್ಲಕ್ಕಿಯ ಒಳಗಿನಿಂದ ತೆರೆಯಬಹುದು ಅಥವಾ ಮುಚ್ಚಬಹುದು.  ಅದು ತನ್ನ ನಿವಾಸಿಗಳಿಗೆ ಪ್ರಯಾಣಿಸುವಾಗ ಶಾಖ ಮತ್ತು ಧೂಳಿನಿಂದ ಆಶ್ರಯ ನೀಡುತ್ತದೆ. ಇದು ನಾಲ್ಕು ಮೂಲೆಗಳಲ್ಲಿ ಬಿದಿರಿನ ಕಂಬಗಳನ್ನು ಹೊಂದಿರುತ್ತದೆ.  ಕಂಚಿನ ಫಿನಿಯಲ್‌ಗಳನ್ನು ಪಾಲ್ಕಿಯ ಬಿದಿರಿನ ಕಂಬದ ತುದಿಗಳಲ್ಲಿ ಇರಿಸಲಾಗಿತ್ತು. ಈ ಫಿನಿಯಲ್‌ಗಳು ಪಕ್ಷಿಗಳು, ಹೂಗಳು, ಪ್ರಾಣಿಗಳು ಮತ್ತು ಪುರಾಣ ಮತ್ತು ಜಾನಪದ ಕಥೆಗಳ ರೂಪದಲ್ಲಿದ್ದವು. ಫಿನಿಯಲ್‌ಗಳ ಬಳಕೆಯು ಮಾಲೀಕರು ಗಂಡು ಅಥವಾ ಹೆಣ್ಣು ಎಂದು ಪ್ರತಿಬಿಂಬಿಸುತ್ತದೆ. ಇವುಗಳ ಗಾತ್ರ, ವಿನ್ಯಾಸ ಮತ್ತು ಶೈಲಿಯಲ್ಲಿ ಕಾಲದಿಂದ ಕಾಲಕ್ಕೆ ಬದಲಾಗುತ್ತಿತ್ತು. ಪಾಲ್ಕಿಯ ವಿನ್ಯಾಸ ಮತ್ತು ಅಲಂಕಾರಿಕ ಕಾರ್ಯವನ್ನು ಸಾಮಾಜಿಕವಾಗಿ ಪ್ರಯಾಣದ ಸ್ಥಿತಿ, ಅಗತ್ಯ, ದೂರ ಮತ್ತು ಉದ್ದೇಶವನ್ನು ಅವಲಂಬಿಸಿರುತ್ತಿತ್ತು. ಸಮೃದ್ಧವಾಗಿ ಅಲಂಕೃತವಾದ ಪಾಲ್ಕಿಯನ್ನು ಸಾಮಾನ್ಯವಾಗಿ ರಾಜಮನೆತನ ಮತ್ತು ಶ್ರೀಮಂತ ವರಿಷ್ಠರಿಗೆ ಮಾತ್ರ ಸೇರಿತ್ತು. ಪಲ್ಲಕ್ಕಿಯ ಮೇಲಿನ ಅಲಂಕಾರ ಮತ್ತು ನೋಟವು ಪ್ರಯಾಣಿಕರ ಸ್ಥಿತಿಯನ್ನು ಬಹಿರಂಗಪಡಿಸುತ್ತಿತ್ತು.

ರಾಜ ಮನೆತನದ ಪಲ್ಲಕ್ಕಿಗಳಲ್ಲಿ ಧಾರಕರ ಜೊತೆಗೆ ದೀಪ-ಧಾರಕರು, ಗಾಯಕರು, ನರ್ತಕರು ಮತ್ತು ಕಥೆ ಹೇಳುವವರು ಇದ್ದರು. ಧಾರಕರನ್ನು ದುಲಿಯಾ, ಕಹಾರ್, ಬೆಹರಾ, ಬೋಯೀ ಮುಂತಾದ ವಿವಿಧ ಪ್ರಾದೇಶಿಕ ನಾಮಕರಣಗಳೊಂದಿಗೆ ಪರಿಚಿತರಾಗಿದ್ದರು. ಧಾರಕರು ಪ್ರಯಾಣದ ಉದ್ದಕ್ಕೂ ಹಾಡುತ್ತಿದ್ದರು. ಇದು ಆನುವಂಶಿಕವಾಗಿ ಬಳಸುತ್ತಿದ್ದ ವೃತ್ತಿಯಾಗಿತ್ತು. ಈ ವೃತ್ತಿಯಲ್ಲಿ ಪ್ರವೇಶಿಸುವ ಪುರುಷರು ದೈಹಿಕವಾಗಿ ಸದೃಡರಾಗಿರಬೇಕಿತ್ತು.ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ಧಾರಕರು ಭುಜಗಳ ಮೇಲೆ ಪ್ಯಾಡ್‌ಗಳನ್ನು ಸೇರಿಸುವ ಮೂಲಕ ಎತ್ತರದ ವ್ಯತ್ಯಾಸವನ್ನು ಸರಿ ಮಾಡುತ್ತಿದ್ದರು. ದೂರ ಪ್ರಯಾಣಗಳಲ್ಲಿ ಪ್ರಯಾಣಿಕರು ಆಗಾಗ್ಗೆ ಅಗತ್ಯವಾದ ವಸ್ತುಗಳನ್ನು ದಿನಚರಿಯಲ್ಲಿ ಬಳಸುತ್ತಿದ್ದರು ಉದಾ. ಲೋಹದ ಬೋಗುಣಿ, ಚಾಕು, ಸಾಬೂನು, ಕತ್ತರಿ ಇತ್ಯಾದಿ.

 

17 ಮತ್ತು 18 ನೇ ಶತಮಾನಗಳಲ್ಲಿ ಯುರೋಪಿಯನ್ ವ್ಯಾಪಾರಿಗಳು ಬಜಾರುಗಳನ್ನು ಭೇಟಿ ಮಾಡಲು ಮತ್ತು ತಮ್ಮ ಸರಕುಗಳನ್ನು ಸಾಗಿಸಲು ಹೆಚ್ಚಾಗಿ ಪಲ್ಲಕ್ಕಿಯನ್ನು ಬಳಸುತ್ತಿದ್ದರು. ಕೆಲವು ಬ್ರಿಟಿಷ್ ಕಂಪನಿಗಳಲ್ಲಿ ಸೇವೆ ಮಾಡುತ್ತಿದ್ದ ಕಡಿಮೆ ಸಂಬಳದ ಗುಮಸ್ತರು ಸಹ ಪಾಲ್ಕಿ ಖರೀದಿಸಲು ಶುರು ಮಾಡಿದರು. ಪಾಲ್ಕಿ ಖರೀದಿಸುವ ವ್ಯಕ್ತಿಯ ಅಭ್ಯಾಸವು ಇತರ ಹಾನಿಕಾರಕ ಅಭ್ಯಾಸಗಳಿಗೆ ಕಾರಣವಾಗುತ್ತದೆ ಎಂದು ತಿಳಿದು ಈಸ್ಟ್ ಇಂಡಿಯಾ ಕಂಪನಿಯ ನ್ಯಾಯಾಲಯವು 1758 ರಲ್ಲಿ ಸಣ್ಣ ಗುಮಾಸ್ತರಿಗೆ ಪಲ್ಲಕ್ಕಿಗಳನ್ನು ಖರೀದಿಸಲು ಮತ್ತು ನಿರ್ವಹಿಸಲು ನಿಷೇಧವೇರಿತು. ಈವಾಗಿನ ದುಬಾರಿ ಕಾರಿನಂತೆ ಅಂದಿನ ಪಾಲ್ಕಿಗಳಾಗಿದ್ದವು. ರೈಲ್ವೆ ಯುಗಕ್ಕಿಂತ ಬರುವುದಕ್ಕಿಂತ ಮುಂಚೆ, ಗವರ್ನರ್ ಜನರಲ್ ಸಹ ಪಲ್ಲಕ್ಕಿಯಲ್ಲಿಯೇ ಪ್ರಯಾಣ ಬೆಳೆಸಲು ಅನುಕೂಲಕರವೆಂದು ಉಪಯೋಗಿಸುತ್ತಿದ್ದರು.

 

 

19ನೇ ಶತಮಾನದ ಆರಂಭದಲ್ಲಿ, ಅಂಚೆ ಇಲಾಖೆಯು ಅಂಚೆಗಳನ್ನು ಸಾಗಿಸಲು ಪಲ್ಲಕ್ಕಿ ವ್ಯವಸ್ಥೆಯನ್ನು ಪರಿಚಯಿಸಿತು ಮತ್ತು ಹಣ ಪಾವತಿಸಿದರೆ ಪ್ರಯಾಣಿಕರನ್ನು ಸಹ ಸಾಗಿಸುತ್ತಿದ್ದರು. ರವೀಂದ್ರನಾಥ ಟ್ಯಾಗೋರ್ ಅವರು ಶಿಲೈದಾಹದಲ್ಲಿ ತಮ್ಮ ಜಮೀನ್ದಾರಿ ಕಚೇರಿಗೆ ಭೇಟಿ ನೀಡಿದಾಗ ಬಳಸಿದ ಪಲ್ಲಕ್ಕಿಯನ್ನು ಇನ್ನೂ ಟ್ಯಾಗೋರ್ ಮ್ಯೂಸಿಯಮ್ ನಲ್ಲಿ ಸಂರಕ್ಷಿಸಲಾಗಿದೆ. ಶ್ರೀಮಂತ ಜನರು ಸಾಮಾನ್ಯವಾಗಿ ಪಲ್ಲಕ್ಕಿಗಳನ್ನು ಹೊಂದಿದ್ದರು, ಮುಖ್ಯವಾಗಿ ತಮ್ಮ ಗುಲಾಮರನ್ನು ಹೊತ್ತೋಯ್ಯಲು ಬಳಸುತ್ತಿದ್ದರು ಮತ್ತು ಸಾಮಾನ್ಯ ಜನರು ಇದನ್ನು ತಮ್ಮ ಜೀವನ ಸಾಗಿಸಲು ಬಾಡಿಗೆಗೆ ಬಳಸುತ್ತಿದ್ದರು. 19ನೇ ಶತಮಾನದ ಮಧ್ಯಭಾಗದಿಂದ ಸ್ಟೀಮರ್ ಮತ್ತು ರೈಲು ಯುಗ ಪ್ರಾರಂಭವಾದಾಗ ಪಾಲ್ಕಿ ಸಾರಿಗೆ ವಿಧಾನ ಕುಸಿಯಲು ಪ್ರಾರಂಭಿಸಿತು. ರಸ್ತೆಗಳ ಮತ್ತು ಹೆದ್ದಾರಿಗಳ ಅಭಿವೃದ್ಧಿ ಮತ್ತು ಪ್ರಾಣಿ- ಬಂಡಿಗಳು ಮತ್ತು ಮೋಟರ್ ಗಾಡಿಗಳ ಬಳಕೆಯಿಂದ ಪಲ್ಲಕ್ಕಿಯ ಸಾರಿಗೆ ಅಳಿವಿನಂಚಿಗೆ ಬಂದಿತು. 1930 ರ ನಂತರ ನಗರ ಪ್ರದೇಶಗಳಲ್ಲಿ ರಿಕ್ಷಾ ಪರಿಚಯವಾದ ನಂತರ ಪಾಲ್ಕಿಯನ್ನು ಹೊರಹಾಕಿತು. ಆದರೆ ಪರದಾ ವ್ಯವಸ್ಥೆಯನ್ನು ಹೊಂದಿದ್ದ ಕುಟುಂಬಗಳು 1960 ರ ದಶಕದವರೆಗೂ ಪಲ್ಲಕ್ಕಿಯನ್ನು ಬಳಸುತ್ತಿದ್ದವು.

ಇಂದಿಗೂ ಭಾರತೀಯ ಮದುವೆಗಳಲ್ಲಿ ವಧುವಿನ ಧೂಲಿ ಅಥವಾ ಡೋಲಿಯನ್ನು ಕಾಣಬಹುದು. ಧಾರ್ಮಿಕ ಮತ್ತು ರಾಜಮನೆತನದ ಮೆರವಣಿಗೆಗಳು, ವಿವಿಧ ಸಾಮಾಜಿಕ-ಸಾಂಸ್ಕೃತಿಕ ಸಮಾರಂಭಗಳಿಗೆ ಪಾಲ್ಕಿಯ ವ್ಯಾಪಕ ಸಾಂಪ್ರದಾಯಿಕ ಬಳಕೆಯು ಇಂದಿಗೂ ಭಾರತೀಯ ಪರಂಪರೆಯಲ್ಲಿ ಒಂದು ಧಾರ್ಮಿಕ ಸ್ಥಾನವನ್ನು ನೀಡಿದೆ. ಭಾರತೀಯ ಸಂಗೀತ ಪರಂಪರೆಯಲ್ಲಿ ವಿಶೇಷ ಪಾಲ್ಕಿ ಹಾಡುಗಳಿಂದ ಸಮೃದ್ಧವಾಗಿದೆ.

 

 

 

2 thoughts on “ಇದು ಮೆರವಣಿಗೆಯಲ್ಲ..ಪ್ರಯಾಣ

Leave a Reply

Your email address will not be published. Required fields are marked *