ಈ ಬೆಂಚ್‌ ಮಧ್ಯೆ ಕುಳಿತರೆ ಎರಡು ರಾಜ್ಯಗಳಲ್ಲಿ ಕುಳಿತಂತೆ..!

Share This

ಇಡೀ ದೇಶಕ್ಕೇ ಇದೊಂದು ಸ್ಪೆಷಲ್‌ ರೈಲ್ವೇ ಸ್ಟೇಷನ್‌. ಇಬ್ಬರು ಅಣ್ಣ ತಮ್ಮಂದಿರು ಮನೆಯನ್ನು ಭಾಗ ಮಾಡಿಕೊಳ್ತಾರಲ್ಲ. ಹಾಗೆ ಈ ರೈಲು ನಿಲ್ದಾಣವನ್ನು ಎರಡು ರಾಜ್ಯಗಳು ಭಾಗ ಮಾಡಿಕೊಂಡಿವೆ. ಬರೀ ನಿಲ್ದಾಣವನ್ನಲ್ಲ, ನಿಲ್ದಾಣದಲ್ಲಿರುವ ಒಂದು ಬೆಂಚ್‌ ಕೂಡಾ ಎರಡು ರಾಜ್ಯಕ್ಕೆ ಭಾಗವಾಗಿದೆ. ಟಿಕೆಟ್‌ ಕೌಂಟರ್‌ ಒಂದು ರಾಜ್ಯಕ್ಕೆ ಸೇರಿದ್ರೆ, ಸ್ಟೇಷನ್‌ ಮಾಸ್ಟರ್‌ ಕೊಠಡಿ ಇನ್ನೊಂದು ರಾಜ್ಯದ ಪಾಲಾಗಿದೆ. ಇಂತ ವಿಶೇಷವಾದ ರೈಲ್ವೆ ಸ್ಟೇಷನ್‌ ಇರೋದು ಮಹಾರಾಷ್ಟ್ರ ಹಾಗೂ ಗುಜರಾತ್‌ ಗಡಿಯಲ್ಲಿ..!


ನವಪುರ್‌.. ಇದು ಮಹಾರಾಷ್ಟ್ರದ ನಂದುರ್ಬಾರ್‌ ಜಿಲ್ಲೆಯ ತಾಲ್ಲೂಕು ಕೇಂದ್ರ. ಈ ನವಪುರ್‌ ನಲ್ಲಿರುವ ರೈಲು ನಿಲ್ದಾಣವೇ ಎಲ್ಲರ ಗಮನ ಸೆಳೆಯುತ್ತಿರೋದು. ಈ ರೈಲು ನಿಲ್ದಾಣಕ್ಕೆ ಭೇಟಿ ಕೊಟ್ಟಾಕ್ಷಣ ಅಚ್ಚರಿ ಮೂಡಿಸೋದು ಒಂದು ಬೆಂಚ್‌. ಆ ಬೆಂಚ್‌ ಅರ್ಧ ಭಾಗಕ್ಕೆ ಸರಿಯಾಗಿ ಬಣ್ಣದ ಗೆರೆ ಎಳೆಯಲಾಗಿದೆ. ಜೊತೆಗೆ ಬೆಂಚ್‌ ನ ಒಂದು ಭಾಗದಲ್ಲಿ ಮಹಾರಾಷ್ಟ್ರ, ಇನ್ನೊಂದು ಭಾಗದಲ್ಲಿ ಗುಜರಾತ್‌ ಎಂದು ಬರೆಯಲಾಗಿದೆ. ಬೆಂಚ್‌ ಮಧ್ಯೆ ಕುಳಿತರೆ ಎರಡು ರಾಜ್ಯಗಳಲ್ಲಿ ಕುಳಿತಂತೆಯೇ ಲೆಕ್ಕ..!


ಗಡಿ ವಿಂಗಡಣೆ ವೇಳೆಯಲ್ಲಿ ಈ ರೈಲು ನಿಲ್ದಾಣ ಎರಡು ರಾಜ್ಯಗಳಿಗೆ ಭಾಗವಾಗಿದೆ. ಈ ವೇಳೆ ಬೆಂಚ್‌ ಸಮೇತ ಭಾಗ ಮಾಡಿಬಿಟ್ಟಿದ್ದಾರೆ. ಹೀಗಾಗಿ ಇದು ಎಲ್ಲರಿಗೂ ವಿಶೇಷ ಎನಿಸುತ್ತದೆ. ತಾಲ್ಲೂಕು ಕೇಂದ್ರದಲ್ಲಿರುವ ಈ ರೈಲು ನಿಲ್ದಾಣ ೮೦೦ ಮೀಟರ್‌ ಉದ್ದವಿದೆ. ಇದರಲ್ಲಿ ೫೦೦ ಮೀಟರ್‌ ಗುಜರಾತ್‌ ಗೆ ಸೇರುತ್ತೆ. ಉಳಿದ ೩೦೦ ಮೀಟರ್‌ ಮಹಾರಾಷ್ಟ್ರದ ಪಾಲಾಗಿದೆ. ಅಷ್ಟೇ ಏಕೆ, ಈ ನಿಲ್ದಾಣದಲ್ಲಿರುವ ಸ್ಟೇಷನ್‌ ಮಾಸ್ಟರ್‌ ಆಫೀಸ್‌, ಪ್ರಯಾಣಿಕರ ತಂಗುದಾಣ ಗುಜರಾತ್‌ ನ ತಾಪಿ ಜಿಲ್ಲೆ ವ್ಯಾಪ್ತಿಗೆ ಬರುತ್ತದೆ. ಟಿಕೆಟ್‌ ಕೌಂಟರ್‌ ಹಾಗೂ ಪೊಲೀಸ್‌ ಠಾಣೆ ಮಹಾರಾಷ್ಟ್ರದ ನಂದುರ್ಬಾರ್‌ ಜಿಲ್ಲಾ ವ್ಯಾಪ್ತಿಗೆ ಬರುತ್ತದೆ. ಎರಡು ರಾಜ್ಯಗಳಿಗೆ ಭಾಗವಾಗಿರುವುದರಿಂದ ಇಲ್ಲಿ ಎಲ್ಲಾ ಅನೌನ್ಸ್‌ ಮೆಂಟ್‌ ಗಳನ್ನೂ ಮರಾಠಿ ಹಾಗೂ ಗುಜರಾತಿ ಎರಡು ಭಾಷೆಗಳಲ್ಲಿ ಮಾಡುತ್ತಾರೆ. ಇದರ ಜೊತೆಗೆ ಇಂಗ್ಲೀಷ್‌, ಹಿಂದಿ ಭಾಷೆಗಳಲ್ಲೂ ಪ್ರಕಟಣೆಗಳನ್ನು ಮಾಡುತ್ತಾರೆ.

Leave a Reply

Your email address will not be published. Required fields are marked *