July 24, 2020

ಮೈಸೂರಿಗೆ ಬಂದರೆ ಮಹಾರಾಣಿಯ ಈ ರೈಲು ನೀವು ನೋಡಲೇಬೇಕು..

Share This

 

ಅರಮನೆಗಳ ನಗರಿ ಮೈಸೂರಲ್ಲಿ ಮೂಲೆ ಮೂಲೆಗೂ ಒಂದೊಂದು ಕೌತುಕ ಕಾಣಸಿಗುತ್ತದೆ.. ಇಲ್ಲಿನ ಪ್ರತಿ ರಸ್ತೆ, ಪ್ರತಿ ಏರಿಯಾ ರಾಜರ ಕಾಲದ ವೈಭವವನ್ನು ಕಣ್ಣಮುಂದೆ ತರಿಸುತ್ತದೆ.. ಇನ್ನು ಅರಮನೆಯಲ್ಲಿ ಮಹಾರಾಣಿಯರಿಗೆ ವಿಶೇಷ ಪ್ರಾಮುಖ್ಯತೆ.. ಅಡಿಗಡಿಗೂ ಸಿಗುವ ಪರಿಚಾರಕಿಯರು.. ವೈಭವೋಪೇತವಾದ ಕೊಠಡಿಗಳು.. ಸಕಲ ಸೌಕರ್ಯಗಳೂ ಅವರಿಗೆ ದಯಪಾಲಿಸಿರುತ್ತವೆ.. ಅರಮನೆಯಲ್ಲಿ ವೈಭವದ ಜೀವನ ನಡೆಸುವ ಮಹಾರಾಣಿಯರು ಹೊರಗೆ ಸುತ್ತಾಡಬೇಕಾದರೂ ಅದೇ ವೈಭವವಿರುತ್ತದೆ.. ಅಂತಹ ಚಲಿಸುವ ವೈಭವವೇ ಇದು..


ಹೌದು.. ಇದು ಮೈಸೂರು ಮಹಾರಾಣಿ ಪ್ರಯಾಣ ಮಾಡುತ್ತಿದ್ದ ವಿಶೇಷ ರೈಲು ಭೋಗಿ.. ಇತಿಹಾಸವನ್ನು ಕೆದಕುತ್ತಾ ಹೋದರೆ ಭಾರತದ ಬೇರೆ ಯಾವ ರಾಣಿಗೂ ಇಂತಹ ವಿಶೇಷ ರೈಲು ವ್ಯವಸ್ಥೆ ಇದ್ದ ಉದಾಹರಣೆ ಸಿಗುವುದಿಲ್ಲ.. ಅಂದಹಾಗೆ ಈ ರೈಲು ನಿರ್ಮಾಣವಾಗಿದ್ದು ೧೮೯೯ರಲ್ಲಿ.. ಇಂಗ್ಲೆಂಡಿನ ಹಸರ್ಟ್‌ ಮತ್ತು ನೆಲ್ಸನ್‌ ಎಂಬ ಕಂಪನಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಧರ್ಮಪತ್ನಿಗಾಗಿ ಈ ವಿಶೇಷ ರೈಲು ಭೋಗಿಯನ್ನು ತಯಾರಿಸಿಕೊಟ್ಟಿತ್ತು.. ಅರಮನೆಯಲ್ಲಿದ್ದಂತೆಯೇ ಇಲ್ಲಿ ಸಕಲ ಸೌಕರ್ಯಗಳೂ ಇವೆ.. ಮೊದಲಿಗೆ ನಮಗೆ ಸಿಗೋದೇ ಮಹಾರಾಣಿಯ ಕೊಠಡಿ.. ಇದರಲ್ಲಿ ಡ್ರೆಸ್ಸಿಂಗ್‌ ಟೈಬಲ್‌ ಇದೆ.. ಮಡಚಬಹುದಾದ ಕಾರ್ಡ್‌ ಟೇಬಲ್‌ ಇದೆ.. ಮಹಾರಾಣಿ ಕುಳಿತುಕೊಳ್ಳಲು ವಿಶೇಷವಾಗಿ ತಯಾರಿಸಿದ ಚೇರ್‌ ಇದೆ.. ರೈಟಿಂಗ್‌ ಟೇಬಲ್‌, ಮಹಾರಾಣಿ ಮಲಗುವ ಮಂಚ, ವೆಸ್ಟ್ರನ್‌ ಟಾಯ್ಲೆಟ್‌ ಹಾಗೂ ಬಾತ್‌ ರೂಮ್‌ ಕೂಡಾ ಇದೆ..


ಮಹಾರಾಣಿ ಕೊಠಡಿಯ ಪಕ್ಕವೇ ಮಹಾರಾಣಿ ಊಟ ಮಾಡುವ ಪುಟ್ಟದಾದ ಡೈನಿಂಗ್‌ ರೂಂ ಇದೆ.. ಅದರ ಪಕ್ಕ ಮಹಾರಾಣಿ ದೇವರ ಪ್ರಾರ್ಥನೆ ಮಾಡಲು ಪ್ರೇಯರ್‌ ರೂಂ ಕೂಡಾ ಇದೆ.. ಮಹಾರಾಣಿ ಇದ್ದಾರೆ ಎಂದರೆ ಆಕೆ ಹೇಳಿದ್ದನ್ನು ಮಾಡುವ ಪರಿಚಾರಕಿಯರೂ ಇರಲೇಬೇಕಲ್ಲವೇ.. ಅವರಿಗಾಗಿಯೂ ಒಂದು ಕೊಠಡಿ ಇದೆ.. ಆ ಕೊಠಡಿಯಲ್ಲೂ ಬೆಡ್‌ ವ್ಯವಸ್ಥೆ, ಇಂಡಿಯನ್‌ ಟಾಯ್ಲೆಟ್‌ ಹಾಗೂ ಸ್ನಾನದ ಕೊಠಡಿಯ ವ್ಯವಸ್ಥೆ ಇದೆ.. ಪಕ್ಕದಲ್ಲಿ ಸ್ಟೋರ್‌ ರೂಂ ಇದೆ.. ಇಲ್ಲಿ ಸಮಾನು ಸರಂಜಾಮುಗಳನ್ನು ಜೋಡಿಸಿಕೊಳ್ಳಲಾಗುತ್ತಿತ್ತು.. ಅದರ ಪಕ್ಕವೇ ಸುಸಜ್ಜಿತವಾದ ಅಡುಗೆ ಕೋಣೆ ಇದೆ.. ಅದರಲ್ಲಿ ಅಡುಗೆ ಒಲೆ, ಒರಳು ಕಲ್ಲು ಸೇರಿದಂತೆ ಅಡುಗೆ ಮನೆಯಲ್ಲಿರಬೇಕಾದ ವ್ಯವಸ್ಥೆ ಇದೆ.. ಮುಂದೆ ಹೋದರೆ ಕಾಮನ್‌ ಬಾತ್‌ ರೂಮ್‌ ಇದೆ.. ಅದರ ಪಕ್ಕದಲ್ಲಿ ನೀರು ಕಾಯಿಸಲು ಬಾಯ್ಲರ್‌ ಇದೆ..


ಮೀಟರ್‌ ಗೇಜ್‌ ನ ಈ ರೈಲು ಬೋಗಿಯನ್ನು 1899ರಲ್ಲಿ ಇಂಗ್ಲೆಂಡ್‌ ನಿಂದ ತರಿಸಿಕೊಳ್ಳಲಾಗಿತ್ತು.. ನಂತರ ಅದನ್ನು 1914ರಲ್ಲಿ ನವೀಕರಣಗೊಳಿಸಲಾಯಿತು.. ಆಗ ಹೌರಾದ ಬರ್ನ್‌ ಅಂಡ್‌ ಕಂಪನಿ ಈ ಮಹಾರಾಣಿ ರೈಲು ಬೋಗಿಯನ್ನು ನವೀಕರಣ ಮಾಡಿತು.. ಅಡುಗೆ ಮನೆಯಲ್ಲಿ ಪುರಾತನ ಅಲ್ಯೂಮಿನಿಯಂ ಅಡುಗೆ ಪಾತ್ರೆಗಳು, ಸ್ಥಿರ ಮತ್ತು ಹೊಂದಾಣಿಕೆ ಮಾಡಬಹುದಾದ ಅಡುಗೆ ಒಲೆ, ಅರ್ಧ ಒರಳು ಕಲ್ಲು, ಪಾರಂಪರಿಕವಾಗಿ ಬಿಸಿ ನೀರು ಒದಗಿಸುವ ಯಂತ್ರ, ತಾಮ್ರದ ಪಾತ್ರೆಗಳು ಇತ್ಯಾದಿಗಳನ್ನು ಅಳವಡಿಸಲಾಯಿತು..


ಅಂದಹಾಗೆ ಈ ರೈಲು ಬೋಗಿ ಈಗ ಮೈಸೂರು ರೈಲ್ವೆ ಮ್ಯೂಸಿಯಂನಲ್ಲಿ ಇಡಲಾಗಿದೆ.. ಎಲ್ಲರೂ ಇದನ್ನು ನೋಡಿ ಕಣ್ತುಂಬಿಕೊಳ್ಳಬಹುದು.. ಶ್ರೀರಂಗ ಪೆವಿಲಿಯನ್‌ ಎಂಬ ಹೆಸರಿನ ಕಟ್ಟಡದೊಳಗೆ ಈ ಮಹಾರಾಣಿ ಸಲೂನ್‌ ರೈಲು ಬೋಗಿಯನ್ನು ಇಟ್ಟಿದ್ದಾರೆ.. ಒಂದು ದಿನಾ ಪೂರ್ತಿ ನೋಡಿದರೂ ಮುಗಿಯದಷ್ಟು ವಿಶೇಷಗಳು ಈ ರೈಲ್ವೆ ಮ್ಯೂಸಿಯಂನಲ್ಲಿವೆ.. ಗೂಗಲ್‌ ನಲ್ಲಿ ಜಾಲಾಡಿದರೆ ಮೈಸೂರು ರಾಣಿಯ ರೈಲು ಸಲೂನ್‌ ಬಿಟ್ಟರೆ ಪ್ರಪಂಚದಲ್ಲಿ ಇಂತಹ ರೈಲು ಸಲೂನ್‌ ಇದ್ದಿದ್ದು ಇಂಗ್ಲೆಂಡ್‌ ನ ರಾಣಿಗೆ ಮಾತ್ರ.. ಅದೂ ಕೂಡಾ ಮೈಸೂರು ಮಹಾರಾಣಿಯ ಸಲೂನ್‌ ಗಿಂತ ಅತ್ಯಂತ ವೈಭವದಿಂದ ಕೂಡಿದೆ..

Leave a Reply

Your email address will not be published. Required fields are marked *