ಮಿಲಿಟರಿ ಮಾಧವರಂ.. ಇದು 2 ಸಾವಿರ ಸೈನಿಕರನ್ನು ನೀಡಿದ ಗ್ರಾಮ..!

Share This

ಆಂಧ್ರಪ್ರದೇಶಕ್ಕೆ ಹೋಗಿ ಮಾಧವರಂ ಅಂದರೆ ಹೆಚ್ಚು ಜನಕ್ಕೆ ಗೊತ್ತಾಗೋದೇ ಇಲ್ಲ.. ಆದರೆ ಮಿಲಿಟರಿ ಮಾಧವರಂ ಅಂದರೆ ಗೊತ್ತಿಲ್ಲದೇ ಇರೋರೇ ಸಿಗೋದಿಲ್ಲ. ಯಾಕಂದ್ರೆ, ಈ ಸಣ್ಣ ಗ್ರಾಮ ದೇಶ ಕಾಯುವ ಯೋಧರಿಗೆ ಜನ್ಮ ನೀಡುವ ಪುಣ್ಯಭೂಮಿ. ಮಿಲಿಟರಿ ಮಾಧವರಂನಲ್ಲಿ ಇದುವರೆಗೆ 2 ಸಾವಿರ ಮಂದಿ ಸೈನ್ಯ ಸೇರಿದ್ದಾರೆ. ಹಲವಾರು ಮಂದಿ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ.

ಮಿಲಿಟರಿ ಮಾಧವರಂಗೆ ಸುದೀರ್ಘ ಚರಿತ್ರೆಯೇ ಇದೆ
ಪಶ್ಚಿಮ ಗೋದಾವರಿ ಜಿಲ್ಲೆ ತಾಡೇಪಲ್ಲಿ ಗುಡೆಂ ಮಂಡಲ್‌ (ಗ್ರಾಮ ಪಂಚಾಯಿತಿ) ವ್ಯಾಪ್ತಿಯಲ್ಲಿ ಬರುವ ಮಾಧವರಂ ಗ್ರಾಮಕ್ಕೂ, ಸೈನ್ಯಕ್ಕೂ ನೂರಾರು ವರ್ಷಗಳಿಂದ ಅನುಬಂಧವಿದೆ. ಸದ್ಯ ದೇಶದಲ್ಲಿ ಎಲ್ಲಾ ರೆಜಿಮೆಂಟ್‌ ಗಳಲ್ಲೂ ಒಬ್ಬ ಸೈನಿಕನಾದರೂ ಈ ಊರಿನವರು ಇದ್ದಾರೆ. ಈ ಮಿಲಿಟರಿ ಮಾಧವರಂನ ಪ್ರತಿ ಕುಟುಂಬದವರೂ ಭೂ ಸೇನೆ, ವಾಯುಸೇನೆ ಹಾಗೂ ನೌಕಾ ಸೇನೆ ಎಲ್ಲದರಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಮನೆಗೆ ಕನಿಷ್ಠ ಒಬ್ಬರಾದರೂ ಸೇನೆಯಲ್ಲಿ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಈ ಗ್ರಾಮದಿಂದ ಇದುವರೆಗೆ ೨ ಸಾವಿರ ಮಂದಿ ಸೈನ್ಯಕ್ಕೆ ಸೇರಿದ್ದು, ಸದ್ಯ 340 ಮಂದಿ ಈಗಲೂ ಸೇವೆ ಸಲ್ಲಿಸುತ್ತಿದ್ದಾರೆ.
ದೇಶಕ್ಕಾಗಿ ಕೆಲಸ ಮಾಡಿದಾಗ ಸಿಗುವ ಸಂತೃಪ್ತಿ, ನೆಮ್ಮದಿ ಇನ್ನೆಲ್ಲೂ ಸಿಗುವುದಿಲ್ಲ ಎಂಬುದು ಸೇನೆಯಿಂದ ನಿವೃತ್ತರಾಗಿ ಗ್ರಾಮದಲ್ಲಿ ವಾಸವಿರುವ ನಿವೃತ್ತ ಸೈನಿಕರ ಮಾತು. ಬಟ್ರೆಡ್ಡಿ ರಾಜಾರಾವ್‌ ಎಂಬುವವರು ೧೯೭೫ನಿಂದ ೨೩ ವರ್ಷ ಸೇನೆಯಲ್ಲಿ ಕೆಲಸ ಮಾಡಿದ್ದಾರೆ. ಅವರ ತಂದೆ, ಅವರ ಇಬ್ಬರು ಸಹೋದರರು, ಚಿಕ್ಕಪ್ಪ ಕೂಡಾ ಸೇನೆಯಲ್ಲಿ ಸೇವೆ ಸಲ್ಲಿಸಿದವರೇ. ಅಷ್ಟೇ ಏಕೆ, ಬಟ್ರೆಡ್ಡಿ ರಾಜಾರಾವ್‌ ಅವರ ಅಜ್ಜಂದಿರು ಕೂಡಾ ಮೊದಲ ಮತ್ತು ಎರಡನೇ ಪ್ರಪಂಚ ಯುದ್ಧದಲ್ಲಿ ದೇಶದ ಪರವಾಗಿ ಹೋರಾಟ ನಡೆಸಿದ್ದರಂತೆ..!

ಒಂದೇ ಊರಿನಿಂದ ಇಷ್ಟು ಜನ ಸೈನ್ಯಕ್ಕೆ ಹೇಗೆ ಸೇರುತ್ತಿದ್ದಾರೆ..?
ಗಜಪತಿಗಳ ಕಾಲದಲ್ಲಿ ಪೂಸಪಾಟಿ ಮಾಧವ ವರ್ಮಾ ಆಳ್ವಿಕೆ ವೇಳೆ ಈ ಗ್ರಾಮ ಹುಟ್ಟಿತೆಂದು ಇತಿಹಾಸ ಹೇಳುತ್ತದೆ. ಗ್ರಾಮಸ್ಥರು ಕೂಡಾ ಇದನ್ನೇ ಹೇಳುತ್ತಾರೆ. 2011ರ ಜನಗಣತಿ ಪ್ರಕಾರ ಈ ಗ್ರಾಮದಲ್ಲಿ ೬೫೦೯ ಮಂದಿ ಇದ್ದಾರೆ. ಪ್ರಸ್ತುತ 7 ಸಾವಿರ ಮಂದಿ ಇರಬಹುದು ಎಂದು ಅಂದಾಜಿಸಲಾಗಿದೆ. ೧೯೨೦ ಕುಟುಂಬಗಳಿವೆ. ಪುರುಷರಿಗಿಂತ ಸ್ತ್ರೀಯರ ಸಂಖ್ಯೆ ಹೆಚ್ಚಿರುವುದೇ ಈ ಗ್ರಾಮದ ಅಭಿವೃದ್ಧಿಗೆ ಕಾರಣ ಎಂದು ಇಲ್ಲಿನ ಜನರು ಹೇಳುತ್ತಾರೆ. ಮಿಲಿಟರಿ ಮಾಧವರಂನಲ್ಲಿ ಶೇಕಡಾ 80ರಷ್ಟು ಮಂದಿ ಅಕ್ಷರಸ್ಥರಿದ್ದಾರೆ.

ಈ ಗ್ರಾಮದಲ್ಲಿ ನಿವೃತ್ತ ಸೈನಿಕರ ಸಂಘಟನೆ ಇದೆ. ಈ ಸಂಘಟನೆ ನೇತೃತ್ವದಲ್ಲಿ ಒಂದು ಗ್ರಂಥಾಲಯ ತೆರೆಲಾಗಿದೆ. ಜೊತೆಗೆ ಯುವಕರಿಗೆ ಸೈನ್ಯ ಸೇರುವ ತರಬೇತಿಯನ್ನು ನಿವೃತ್ತ ಸೈನಿಕರು ನೀಡುತ್ತಾರೆ. ಈ ಕಾರಣಕ್ಕೆ ಈ ಗ್ರಾಮದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಆಯ್ಕೆಯಾಗುತ್ತಿದ್ದಾರೆ. ಮಿಲಿಟರ್‌ ಮಾಧವರಂ ಗ್ರಾಮದ ಹೆಚ್ಚಿನ ಜನ ಸೈನ್ಯಕ್ಕೆ ಸೇರಲು ಉತ್ಸಾಹ ತೋರುತ್ತಿರುವುದು ಪಕ್ಕದ ಗ್ರಾಮಗಳ ಮೇಲೂ ಪ್ರಭಾವ ಬೀರಿದೆ. ಹತ್ತಿರದಲ್ಲೇ ಇರುವ ಅಪ್ಪಾರಾವು ಪೇಟ ಗ್ರಾಮದಿಂದಲೂ ಆರು ಮಂದಿ ಯುವಕರು ಸೈನ್ಯಕ್ಕೆ ಸೇರಿದ್ದಾರೆ.

ಎರಡನೇ ಪ್ರಪಂಚ ಯುದ್ಧದಲ್ಲಿ 12 ಮಂದಿ ಹುತಾತ್ಮ
ಬ್ರಿಟೀಷ್‌ ಆಳ್ವಿಕೆಯಲ್ಲಿದ್ದ ಭಾರತದಲ್ಲಿ ನಡೆದ ಮೊದಲ ಹಾಗೂ ಎರಡನೇ ಪ್ರಪಂಚ ಯುದ್ಧದಲ್ಲಿ ಈ ಗ್ರಾಮದ ಜನರು ಪಾಲ್ಗೊಂಡಿದ್ದರು ಎಂಬುದಕ್ಕೆ ಹಲವು ಸಾಕ್ಷಿಗಳು ಸಿಗುತ್ತವೆ. ಮೊದಲ ಪ್ರಪಂಚ ಯುದ್ಧದಲ್ಲಿ ಪಾಲ್ಗೊಂಡವರಲ್ಲಿ ಒಬ್ಬರು ಹುತಾತ್ಮರಾದರೆ, ಎರಡನೇ ಪ್ರಪಂಚ ಯುದ್ಧದಲ್ಲಿ ಈ ಗ್ರಾಮದ 11 ಮಂದಿ ಬಲಿಯಾಗಿದ್ದಾರೆ. ಎರಡನೇ ಪ್ರಪಂಚ ಯುದ್ಧದಲ್ಲಿ ಈ ಗ್ರಾಮದಿಂದ ಬರೋಬ್ಬರಿ 1100 ಮಂದಿ ಪಾಲ್ಗೊಂಡಿದ್ದರೆಂದು ಗ್ರಾಮದ ನಿವೃತ್ತ ಸೈನಿಕರು ಹೇಳುತ್ತಾರೆ.


ನಿವೃತ್ತ ಸೈನಿಕ ರಾಜಾರಾವ್‌ ಹೇಳುವಂತೆ, ʻ ನಮ್ಮ ಅಜ್ಜಂದಿರ ಕಾಲದಿಂದಲೂ ಸೈನ್ಯಕ್ಕಾಗಿ ದುಡಿಯುವುದು ವಂಶಪಾರಂಪರ್ಯವಾಗಿ ಬರುತ್ತಿದೆ. ಶ್ರೀಕೃಷ್ಣ ದೇವರಾಯ, ಚೋಳರು, ರೆಡ್ಡಿ ರಾಜರ ಕಾಲದಲ್ಲಿ ಸೈನಿಕರಾಗಿ ನಮ್ಮ ಪೂರ್ನಿಕರು ಕೆಲಸ ಮಾಡಿದ್ದಾರೆ. ನಂತರ ಪ್ರಪಂಚ ಯುದ್ಧದಲ್ಲೂ ಹೋರಾಟ ಮಾಡಿದ್ದಾರೆ.ʼ
ಪ್ರಪಂಚ ಯುದ್ಧದಲ್ಲಿ ಬಲಿಯಾದವರ ಜ್ಞಾಪಕಾರ್ಥವಾಗಿ ಮಿಲಿಟರಿ ಮಾಧವರಂ ಗ್ರಾಮದಲ್ಲಿ ಯುದ್ಧ ಸ್ಮಾರಕವನ್ನೂ ಕಟ್ಟಿಸಲಾಗಿದೆ. ಪ್ರಪಂಚ ಯುದ್ಧಗಳಲ್ಲಿ ಸಾವನ್ನಪ್ಪಿದವರ ಹೆಸರುಗಳನ್ನು ಆ ಸ್ತೂಪದ ಮೇಲೆ ನಮೂದಿಸಲಾಗಿದೆ. ಪ್ರತಿ ವರ್ಷ ನಡೆಯುವ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವದಂದು ಹುತಾತ್ಮರಿಗೆ ಗೌರವ ಸಲ್ಲಿಸಲಾಗುತ್ತದೆ.

ಒಂದೇ ಕುಟುಂಬದಲ್ಲಿ 10 ಜನ ಸೈನಿಕರು..!
ಗ್ರಾಮದ ಮಾಜಿ ಸೈನಿಕ ಎಲ್‌.ನಾಗೇಶ್ವರ ರಾವ್‌ ರ ನಾಲ್ವರು ಸಹೋದರರು, ಒಬ್ಬ ಮಗ ಹಾಗೂ ಅಳಿಯ ಕೂಡಾ ಸೈನ್ಯದಲ್ಲಿ ಕೆಲಸ ಮಾಡಿದ್ದಾರೆ. ನಾಗೇಶ್ವರ ರಾವ್‌ ಅವರ ನಾಲ್ವರು ಚಿಕ್ಕಪ್ಪಂದಿರು ಕೂಡಾ ಸೈನ್ಯದಲ್ಲೇ ಇದ್ದರಂತೆ. ಹೀಗಾಗಿ ಇವರ ಕುಟುಂಬದಲ್ಲಿ ೧೦ ಮಂದಿ ಸೈನಿಕರಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ.

ಅಧಿಕೃತವಾಗಿ ಮಿಲಿಟರಿ ಮಾಧವರಂ ಮಾಡಲು ಪ್ರಯತ್ನ

ಎಲ್ಲರೂ ಈ ಗ್ರಾಮವನ್ನು ಮಿಲಿಟರಿ ಮಾಧವರಂ ಎಂದೇ ಕರೆಯುತ್ತಾರೆ. ಸರ್ಕಾರ ಬರೆಸಿರುವ ಬೋರ್ಡ್‌ಗಳಲ್ಲೂ ಮಿಲಿಟರಿ ಮಾಧವರಂ ಎಂದೇ ಬರೆಯಲಾಗಿದೆ. ಆದರೆ ದಾಖಲೆಗಳಲ್ಲಿ ಮಾಧವರಂ ಅಂತ ಮಾತ್ರ ಇದೆ. ಹೀಗಾಗಿ ಮಾಧವರಂ ಹೆಸರಿಗೆ ಮಿಲಿಟರಿ ಎಂದು ಸೇರಿಸಬೇಕೆಂದು ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆ. ಆದರೆ ಕೆಲವು ಕಾನೂನಿನ ತೊಡಕುಗಳಿಂದ ಹೆಸರು ಬದಲಾವಣೆ ತಡವಾಗುತ್ತಿದೆ ಎಂದು ಹೇಳಲಾಗುತ್ತಿದೆ.
(ಮೂಲ;ಬಿಬಿಸಿ)

Leave a Reply

Your email address will not be published. Required fields are marked *