ಕೋರ್ಟ್‌ ಮೂಲಕ ಕೂಗೋ ಹಕ್ಕು ಪಡೆದಿದ್ದ ಹುಂಜ ಸಾವು..!

Share This

ಹಳ್ಳಿಗಳಲ್ಲಿ ಬೆಳಗ್ಗೆಯಾಗಿದೆ ಎಂದು ಈಗಲೂ ಜನರಿಗೆ ಗೊತ್ತಾಗೋದು ಕೋಳಿ ಹುಂಜಗಳ ಕೂಗಿನಿಂದ. ಕೊಕ್ಕರ ಕೂ ಕೂ.. ಎಂದು ಹುಂಜಗಳು ಕೂಗಿದಾಗ ಜನ ಬೆಳಗನ ಜಾವ ಆಗಿದೆ ಎಂದು ಎದ್ದೇಳುತ್ತಾರೆ. ಭಾರತದಲ್ಲಿ ಕೋಳಿ ಕೂಗುವುದನ್ನು ಒಳ್ಳೆಯ ಶಕುನ ಎಂದೇ ಭಾವಿಸಿದ್ದಾರೆ. ಆದರೆ ಫ್ರಾನ್ಸ್‌ ನಲ್ಲಿ ಕೋಳಿ ಹುಂಜ ಕೂಗುವುದು ಅಲ್ಲಿನ ಜನಕ್ಕೆ ಇಷ್ಟವಿರಲಿಲ್ಲ. ಈ ಕಾರಣಕ್ಕೆ ಹುಂಜ ಕೂಗುವುದನ್ನು ತಡೆಯುವುದಕ್ಕೆ ಕೋರ್ಟ್‌ ಮೆಟ್ಟಿಲೇರಿದ್ದರು.


ಫ್ರಾನ್ಸ್‌ ನ ಅಟ್ಲಾಂಟಿಕ್‌ ತೀರದ ಒಲೆರಾನ್‌ ದ್ವೀಪದಲ್ಲಿ ಜಾಕಿ ಫೆಸಿ ಹಾಗೂ ಆತನ ಹೆಂಡತಿ ಕೊರೀನ್‌ ಒಂದು ಕೋಳಿ ಹುಂಜವನ್ನು ಸಾಕಿಕೊಂಡಿದ್ದರು. ಅದರ ಹೆಸರು ಮೌರೀಸ್‌. ಮೌರೀಸ್‌ ಎಲ್ಲಾ ಹುಂಜಗಳಂತೆ ಬೆಳಗಿನ ಜಾವ ಕೂಗುತ್ತಿತ್ತು. ಆದರೆ ಪಕ್ಕದಲ್ಲೇ ಮನೆ ಮಾಡಿದ್ದ ಒಂದು ಜೋಡಿಗೆ ಈ ಕೋಳಿ ಕೂಗುವುದು ಕಿರಿಕಿರಿ ಎನಿಸುತ್ತಿತ್ತು. ಹೀಗಾಗಿ ಅವರು ಕೋಳಿ ನಮ್ಮ ನೆಮ್ಮದಿಗೆ ಭಂಗ ತರುತ್ತಿದೆ ಎಂದು ಆರೋಪಿಸಿ ಕೋರ್ಟ್‌ ಮೆಟ್ಟಿಲೇರಿದ್ದರು.


ಕಳೆದ ವರ್ಷ ಅಂದರೆ ೨೦೧೯ರಲ್ಲಿ ಕೋರ್ಟ್‌ ನಲ್ಲಿ ಈ ಬಗ್ಗೆ ವಿಚಾರಣೆ ನಡೆದಿತ್ತು. ಈ ಕಾರಣದಿಂದಾಗಿ ಹುಂಜ ಮೌರೀಸ್‌ ಹೆಸರು ಫ್ರಾನ್ಸ್‌ ನಾದ್ಯಂತ ಹೆಸರುವಾಸಿಯಾಗಿತ್ತು. ಇನ್ನೊಂದೆಡೆ ಮೌರೀಸ್‌ ಪರವಾಗಿ ಸಾವಿರಾರು ಜನರು ಪಿಟಿಷನ್‌ ಗೆ ಸಹಿ ಹಾಕಿದ್ದರು. ಈ ಕಾರಣದಿಂದಾಗಿ ಜಡ್ಜ್‌ ಮೌರೀಸ್‌ ಪರವಾಗಿಯೇ ತೀರ್ಪು ನೀಡಿದರು. ಜೊತೆಗೆ ಕೇಸ್‌ ಹಾಕಿದವರಿಗೆ ೧೧೦೦ ಡಾಲರ್‌ ಗಳ ದಂಡವನ್ನೂ ವಿಧಿಸಿದ್ದರು. ಇದಾಗಿ ಒಂದು ವರ್ಷ ಕಳೆದಿದೆ ಅಷ್ಟೇ. ಈಗ ಹುಂಜ ಮೌರೀಸ್‌ ಇನ್ನಿಲ್ಲ ಎಂಬ ಸುದ್ದಿ ಬಂದಿದೆ. ಕೋರ್ಟ್‌ ಮೂಲಕ ಕೂಗುವ ಸ್ವಾತಂತ್ರ್ಯ ಪಡೆದಿದ್ದ ಮೌರೀಸ್‌ ತನ್ನ ಆರನೇ ವರ್ಷದಲ್ಲಿ ಸಾವನ್ನಪ್ಪಿದೆ.

Leave a Reply

Your email address will not be published. Required fields are marked *