FIR ಅಂದರೆ ಏನು..? ಅದನ್ನು ಹೇಗೆ ದಾಖಲು ಮಾಡುತ್ತಾರೆ..?

Share This

    FIR ಎಂದರೆ ಪ್ರಾಥಮಿಕ ವರ್ತಮಾನ ವರದಿ (First Information Report) ಎಂದು ಕರೆಯುತ್ತೇವೆ. ಪೊಲೀಸರಿಗೆ ಯಾವುದಾದರೂ ಕಾಗ್ನಿಜಬಲ್‍ ಅಫೆನ್ಸ್‍ ಗೆ ಸಂಬಂಧಿಸಿದ  ಮಾಹಿತಿ ಯಾವುದೇ ಮೂಲದಿಂದ ಬಂದಾಗ ಕೂಡಲೇ ಅದರ ವಿವರಗಳನ್ನು ಬರೆದುಕೊಂಡು ಅದನ್ನು ನಿಗದಿತ ಹಾಳೆಯಲ್ಲಿ ದಾಖಲು ಮಾಡಿಕೊಳ್ಳುವುದೇ FIR.

ದಾಳಿ, ಸುಲಿಗೆ, ಕೊಲೆ ಮುಂತಾದ ಕ್ರಿಮಿನಲ್‌ ಅಪರಾಧಗಳು ನಡೆದಾಗ ಅಪರಾಧ ಮಾಡಿದವರ ಮೇಳೆ ಕ್ರಮ ತೆಗೆದುಕೊಳ್ಳುವುದಕ್ಕೆ ಅಥವಾ ಕಾನೂನು ಪ್ರಕಾರ ಶಿಕ್ಷೆಯಾಗುವಂತೆ ಮಾಡುವುದಕ್ಕೆ ಮೊದಲು ನಾವು ಪೊಲೀಸರಿಗೆ ದೂರು ಸಲ್ಲಿಸಬೇಕಾಗಿರುತ್ತದೆ. ಆ ದೂರಿನ ಆಧಾರದ ಮೇಲೆ ಪೊಲೀಸರು FIR ದಾಖಲಿಸಿಕೊಂಡು ತನಿಖೆ ಶುರು ಮಾಡುತ್ತಾರೆ. ಕಾಗ್ನಿಜಬಲ್‌ ಅಫೆನ್ಸ್‌ ಆದರೆ ದೂರು ಬಂದ ತಕ್ಷಣವೇ ಪೊಲೀಸರು FIR ದಾಖಲಿಸಿಕೊಂಡು ತನಿಖೆ ಶುರು ಮಾಡುತ್ತಾರೆ. ಆದರೆ ನಾನ್‌ ಕಾಗ್ನಿಜಬಲ್‌ ಅಫೆನ್ಸ್‌ ನಲ್ಲಿ ಪ್ರಾಥಮಿಕ ತನಿಖೆ ನಡೆಸಿದ ನಂತರ FIR ದಾಖಲಿಸಲಾಗುತ್ತದೆ.

  ಅಂದಹಾಗೆ ಕಾಗ್ನಿಜಬಲ್‌ ಹಾಗೂ ನಾನ್‌ ಕಾಗ್ನಿಜಬಲ್‌ ಅಫೆನ್ಸ್‌ ಅಂದರೆ ಏನು..? ಎರಡಕ್ಕೂ ಇರುವ ವ್ಯತ್ಯಾಸವೇನು..?

ಐಪಿಸಿಯಲ್ಲಿ ಅಪರಾಧಗಳನ್ನು ಎರಡು ವಿಧಗಳಾಗಿ ವಿಂಗಡಿಸಿದ್ದಾರೆ. ಒಂದು ಕಾಗ್ನಿಜಬಲ್‍ ಅಫೆನ್ಸ್‍,  ಇನ್ನೊಂದು ನಾನ್ ಕಾಗ್ನಿಜಬಲ್‍ ಅಫೆನ್ಸ್‍. ಕ್ರಿಮಿನಲ್‍ ಪ್ರೊಸೀಜರ್‌ ಕೋಡ್‍ 1973 ಸೆಕ್ಷನ್‍ 2 ಸಿ ಪ್ರಕಾರ ಪೊಲೀಸರು ಯಾವುದೇ ವಾರಂಟ್‍ ಇಲ್ಲದೆ ಅರೆಸ್ಟ್‍ ಮಾಡುವಂತಹ ಅಪರಾಧಗಳನ್ನು ಕಾಗ್ನಿಜಬಲ್‌ ಅಪರಾಧಗಳು ಎನ್ನುತ್ತಾರೆ. ಉದಾಹರಣೆ ಕೊಲೆ, ಸುಲಿಗೆ, ಕಿಡ್ನಾಪ್‍, ರೇಪ್‍, ಕಳ್ಳತನ ಇತ್ಯಾದಿ.

ಕಾಗ್ನಿಜಬಲ್‌ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ವಾರಂಟ್ ಇಲ್ಲದೆ ವ್ಯಕ್ತಿಯನ್ನು ಬಂಧಿಸಬಹುದು. ಕಾಗ್ನಜಬಲ್‌ ಅಪರಾಧ ಪ್ರಕರಣದ ತನಿಖೆಯನ್ನು ಸ್ವತಃ ಪ್ರಾರಂಭಿಸಲು ಪೋಲಿಸರಿಗೆ ಅಧಿಕಾರವಿದೆ ಮತ್ತು ಹಾಗೆ ಮಾಡಲು ನ್ಯಾಯಾಲಯದಿಂದ ಯಾವುದೇ ಆದೇಶಗಳ ಅಗತ್ಯವಿಲ್ಲ.

ಸೆಕ್ಷನ್‍ 2 ಎಲ್‍ ಪ್ರಕಾರ ಪೊಲೀಸರು ವಾರಂಟ್‍ ಪಡೆದ ನಂತರವೇ ಅರೆಸ್ಟ್‍ ಮಾಡಬೇಕಾದ ಅಪರಾಧಗಳನ್ನು ನಾನ್‌ ಕಾಗ್ನಿಜಬಲ್‌ ಅಪರಾಧಗಳು ಎನ್ನುತ್ತಾರೆ. ಉದಾಹರಣೆ ನಿಂದನೆ, ಮೋಸ, ವಂಚನೆ ಮುಂತಾದವು.

ನಾನ್‌ ಕಾಗ್ನಿಜಬಲ್‌ ಅಪರಾಧ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗೆ ವಾರಂಟ್ ಇಲ್ಲದೆ ಬಂಧಿಸುವ ಅಧಿಕಾರವಿಲ್ಲ. ನ್ಯಾಯಾಲಯದ ಅನುಮತಿಯಿಲ್ಲದೆ ಪೊಲೀಸರು ಇಂತಹ ಅಪರಾಧವನ್ನು ತನಿಖೆ ಮಾಡಲು ಸಾಧ್ಯವಿಲ್ಲ.

ದೂರು ಹೇಗೆ ಫೈಲ್‌ ಮಾಡಬೇಕು..?

ಸಿಆರ್‍ಪಿಸಿಯ ಸೆಕ್ಷನ್‍ 154 ನಲ್ಲಿ ಈ ಬಗ್ಗೆ ವಿವರಿಸಲಾಗಿದೆ. ಅದರ ಪ್ರಕಾರ ಯಾವುದಾದರೂ ಅಪರಾಧಕ್ಕೆ ಸಂಬಂಧಿಸಿದ ಮಾಹಿತಿಯನ್ನು ಬಾಧಿತರಾಗಲೀ ಅಥವಾ ಅವರ ಪರವಾಗಿ ಬೇರೆ ಯಾರಾದರೂ ಆಗಲೀ ನೇರವಾಗಿ ಅಥವಾ ದೂರವಾಣಿ ಮೂಲಕ ಪೊಲೀಸರಿಗೆ ಮಾಹಿತಿ ನೀಡಬಹುದು. ಬಾಯ್ಮಾತಿನ ಮೂಲಕವಾಗಲೀ, ಬರವಣಿಗೆ ಮೂಲಕವಾಗಲೀ ಈ ದೂರನ್ನು ನೀಡಬೇಕಾಗಿರುತ್ತದೆ. ಬಾಯ್ಮಾತಿನಲ್ಲಿ ಹೇಳಿದ ವಿಷಯವನ್ನು ಪೊಲೀಸರು ಬರಹ ರೂಪ ಕೊಡುತ್ತಾರೆ. ದೂರುದಾರರು ಹೇಳಿದ ಮಾಹಿತಿಯನ್ನು ಬರೆದ ಮೇಲೆ ಅದನ್ನು ದೂರುದಾರರ ಮುಂದೆ ಓದಿ ಹೇಳುವುದು ಕಡ್ಡಾಯ.

ಅಪರಾಧ ಹೇಗೆ ನಡೆಯಿತು..? ಯಾವಾಗ ನಡೆಯಿತು..? ಎಲ್ಲಿ ನಡೆಯಿತು..? ಹಾಗೆಯೇ ಅಪರಾಧ ಮಾಡಿದ ವ್ಯಕ್ತಿ ಬಗ್ಗೆ ಗೊತ್ತಿದ್ದರೆ ಅವನ ಮಾಹಿತಿ ಹೆಸರು, ವಿಳಾಸ ಮುಂತಾದ ಮಾಹಿತಿಯನ್ನು ನೀಡಬೇಕಾಗಿರುತ್ತದೆ. ಈ ವಿಷಯಗಳನ್ನು ಪೊಲೀಸರು ತಮ್ಮ ಜನರಲ್ ‍ಡೈರಿಯಲ್ಲಿ ಕೂಡಾ ಎಂಟ್ರಿ ಮಾಡಿಕೊಳ್ಳುತ್ತಾರೆ. ಅನಂತರ ಪೊಲೀಸರು ಆ ಕಂಪ್ಲೇಂಟ್‍ ನ್ನು ಪೂರ್ತಿಯಾಗಿ ಪರಿಶೀಲನೆ ಮಾಡಿ ಒಂದು ವೇಳೆ ಅದು ಕಾಗ್ನಿಜಬಲ್‍ ಅಫೆನ್ಸ್‍ ಎಂದು ದೃಢವಾದರೆ ಆಗ ಅದನ್ನು ರಿಜಿಸ್ಟರ್‍ ಮಾಡಿಕೊಳ್ಳುತ್ತಾರೆ. ಅದೇ FIR. ತನಿಖೆಯನ್ನು ಮುಂದುವರೆಸುವುದಕ್ಕೆ ಈ FIR ಪ್ರಮುಖ ಪಾತ್ರ ವಹಿಸುತ್ತದೆ.

ಈ ಮೊದಲು ದೂರು ಕೊಟ್ಟರೂ ಪ್ರಾಥಮಿಕ ತನಿಖೆ ಮಾಡಿದ ನಂತರವೇ FIR ದಾಖಲು ಮಾಡಿಕೊಳ್ಳಲಾಗುತ್ತಿತ್ತು. ಆದರೆ 2013ರಲ್ಲಿ ಸುಪ್ರೀಂ ಕೋರ್ಟ್‍ ಲಲಿತಾ ಕುಮಾರಿ ವರ್ಸಸ್‍ ಸ್ಟೇಟ್‍ ಆಫ್‍ ಉತ್ತರ ಪ್ರದೇಶ ಕೇಸ್‍ ನಲ್ಲಿ ಯಾವುದಾದರೂ ವಿಚಾರಣೆ ಮಾಡುವಂತಹ ಪ್ರಕರಣ ನಡೆದ ಬಗ್ಗೆ ಮಾಹಿತಿ ಬಂದಾಗ ಪೊಲೀಸರು ಯಾವುದೇ ಪ್ರಾಥಮಿಕ ತನಿಖೆಯನ್ನೂ ನಡೆಸದೇ ರಿಜಿಸ್ಟರ್‍ ಮಾಡಲೇಬೇಕು ಎಂದು ತೀರ್ಪು ನೀಡಿತು. ಆದರೆ ಕೆಲವು ಕೇಸ್ ಗಳಲ್ಲಿ ಉದಾಹರಣೆಗೆ ಕುಟುಂಬ ಕಲಹಗಳು, ಮೆಡಿಕಲ್ ನೆಗ್ಲಿಜೆನ್ಸಿ, ಕಮರ್ಷಿಯಲ್‍ ಅಫೆನ್ಸಸ್‍ ಅಂದರೆ ಹಣಕಾಸು ವಿಚಾರದ ಅಪರಾಧಗಳಿಗೆ, ಭ್ರಷ್ಟಾಚಾರ ಕೇಸ್‍ ಗಳಲ್ಲಿ ಹಾಗೂ ಯಾವುದಾದರೂ ಅಪರಾಧ ನಡೆದು 3 ತಿಂಗಳ ನಂತರ ಕಂಪ್ಲೇಂಟ್‍ ಮಾಡಿದಾಗ ಪ್ರಾಥಮಿಕ ತನಿಖೆ ಮಾಡಿದ ನಂತರವೇ ಕೇಸ್‍ ರಿಜಿಸ್ಟರ್‍ ಮಾಡಬೇಕೆಂದು ಕೋರ್ಟ್‍ ತೀರ್ಪು ನೀಡಿತ್ತು. ಆ ಪ್ರಾಥಮಿಕ ತನಿಖೆ ಕೂಡಾ 7 ದಿನಗಳ ಒಳಗೆ ಮಾಡಬೇಕೆಂದು ಈ ತೀರ್ಪಿನಲ್ಲಿ ವಿವರಿಸಲಾಗಿದೆ.

ಮಹಿಳೆಯರ ಮೇಲೆ ದೌರ್ಜನ್ಯಗಳಾದಾಗ ತನಿಖೆ ಹೇಗೆ..?

ಬಹುತೇಕ ಸಂದರ್ಭಗಳಲ್ಲಿ ಮಹಿಳೆಯರು ತಮ್ಮ ಮೇಲೆ ನಡೆದ ದೌರ್ಜನ್ಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪೊಲೀಸ್‍ ಠಾಣೆಗೆ ಹೋಗಿ ವಿವರಿಸುವುದಕ್ಕೆ ಧೈರ್ಯ ಮಾಡುತ್ತಿರಲಿಲ್ಲ. ಆದರೆ 2013ರಲ್ಲಿ ಕ್ರಿಮಿನಲ್‍ ಲಾ ಅಮೆಂಡ್‍ಮೆಂಟ್ ಆಕ್ಟ್‍ ಮೂಲಕ ಸಿಆರ್‍ಪಿಸಿ ಯಲ್ಲಿ ಸೆಕ್ಷನ್‍ 154ನ್ನು ತಿದ್ದುಪಡಿ ಮಾಡಲಾಯಿತು. ಇದರ ಪ್ರಕಾರ ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳು ಉದಾಹರಣೆಗೆ ರೇಪ್‍, ಚುಡಾಯಿಸುವುದು, ಆಸಿಡ್‍ ಅಟ್ಯಾಕ್‍ ಮುಂತಾದ ಅಪರಾಧಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮಹಿಳಾ ಪೊಲೀಸ್‍ ಅಧಿಕಾರಿಯೇ ದಾಖಲು ಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಈ ಅಪರಾಧಗಳು ಮಾನಸಿಕ ಹಾಗೂ ಶಾರೀರಿಕ ವಿಕಲಾಂಗರ ಮೇಲೆ ನಡೆದಾಗ ಆ ವಿವರಗಳನ್ನು ಅವರ ಮನೆ ಬಳಿ ಆಗಲೀ, ಇಲ್ಲವೇ ಅವರು ಕೋರಿದ ಬೇರೆ ಯಾವುದೇ ಪ್ರದೇಶದಲ್ಲಾದರೂ ಪ್ರತ್ಯೇಕ ನಿಪುಣರ ಹಾಜರಿಯಲ್ಲಿ ಈ ಮಾಹಿತಿಯನ್ನು ದಾಖಲು ಮಾಡಲಾಗುತ್ತದೆ. ಆ ಸಮಾಚಾರವನ್ನು ದಾಖಲು ಮಾಡುತ್ತಿರುವಾಗ ಅದನ್ನು ವಿಡಿಯೋ ದಾಖಲೆಯನ್ನು ಕೂಡಾ ಮಾಡಬೇಕಾದ ಅವಶ್ಯಕತೆ ಇರುತ್ತದೆ.

ಯಾವ ಸಂದರ್ಭದಲ್ಲಿ FIR ದಾಖಲಿಸಬಹುದು..?

* ನಿಮ್ಮ ಮೇಲೆ ಯಾರಾದರೂ ಅಪರಾಧ ಎಸಗಿದ್ದರೆ,

* ನಿಮಗೆ ಯಾರಾದರೂ ಅಪರಾಧ ಮಾಡುತ್ತಿರುವ ಬಗ್ಗೆ ತಿಳಿದಿದ್ದರೆ,

* ಅಪರಾಧ ಎಸಗಿರುವುದನ್ನು ನೀವು ನೋಡಿದ್ದರೆ,

 

FIRನಲ್ಲಿ ಏನು ಉಲ್ಲೇಖಿಸಿರಬೇಕು?

* ನಿಮ್ಮ ಸರಿಯಾದ ಹೆಸರು ಮತ್ತು ವಿಳಾಸ;

* ನೀವು ವರದಿ ಮಾಡುತ್ತಿರುವ ಘಟನೆಯ ದಿನಾಂಕ, ಸಮಯ ಮತ್ತು ಸ್ಥಳದ ವಿವರ

*  ಘಟನೆ ಸಂಭವಿಸಿದಾಗ ನಡೆದ ನೈಜ ಸಂಗತಿಗಳ ವಿವರ

* ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗಳ ಹೆಸರು ಮತ್ತು ಅವರ ಪೂರ್ಣ ಮಾಹಿತಿ

ಪೊಲೀಸರು FIR ದಾಖಲಿಸದಿದ್ದರೆ ನೀವು ಏನು ಮಾಡಬೇಕು..?

* ನೀವು ಪೊಲೀಸ್ ವರಿಷ್ಠಾಧಿಕಾರಿ ಅಥವಾ ಇತರೆ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡಬಹುದು.  ನಿಮ್ಮ ದೂರಿನ ಬಗ್ಗೆ ಅವರ ಗಮನಕ್ಕೆ ತರಬಹುದು.

* ನಿಮ್ಮ ದೂರನ್ನು ಲಿಖಿತವಾಗಿ ಮತ್ತು ಅಕ್ನಾಲೆಡ್ಜ್‌ ಮೆಂಟ್‌ ಜೊತೆಗೆ ಸಂಬಂಧಪಟ್ಟ ಪೊಲೀಸ್ ವರಿಷ್ಠಾಧಿಕಾರಿಗೆ ರಿಜಿಸ್ಟರ್ಡ್‌ ಪೋಸ್ಟ್‌ ಮಾಡಬಹುದು. ನಿಮ್ಮ ದೂರಿನ ಬಗ್ಗೆ ಪೊಲೀಸ್ ಅಧೀಕ್ಷಕರು ತೃಪ್ತರಾಗಿದ್ದರೆ, ಅವರು ಈ ಪ್ರಕರಣವನ್ನು ಸ್ವತಃ ತನಿಖೆ ಮಾಡುತ್ತಾರೆ ಅಥವಾ ತನಿಖೆಗೆ ಆದೇಶಿಸುತ್ತಾರೆ.

* ನಿಮ್ಮ ನ್ಯಾಯವ್ಯಾಪ್ತಿಯಲ್ಲಿ ಬರುವ ನ್ಯಾಯಾಲಯದ ಮುಂದೆ ಕೂಡಾ ಖಾಸಗಿ ದೂರು ಸಲ್ಲಿಸಬಹುದು.

* ಪೊಲೀಸರು ಕಾನೂನನ್ನು ಜಾರಿಗೆ ತರಲು ಮುಂದಾಗದಿದ್ದರೆ ಅಥವಾ ಪಕ್ಷಪಾತ ಮತ್ತು ಭ್ರಷ್ಟಾಚಾರ ಮಾಡಿದರೆ ನೀವು ರಾಜ್ಯದಲ್ಲಿರುವ ಮಾನವ ಹಕ್ಕುಗಳ ಆಯೋಗ ಅಥವಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಬಹುದು.

Leave a Reply

Your email address will not be published. Required fields are marked *