ರಾಜ್ಯದ ಒಂದೇ ಸ್ಥಳದ ನೀರು ಎರಡು ಸಮುದ್ರ ಸೇರುತ್ತೆ..!

Share This

ಮಳೆ ನೀರು ಕೆರೆ, ಕಾಲುವೆಗಳ ಮೂಲಕ ನದಿ ಸೇರುತ್ತೆ. ಅದೇ ನದಿ ನೀರು ಮುಂದೆ ಬೇರೆ ನದಿಗಳನ್ನು ಸೇರುತ್ತಾ ಸೇರುತ್ತಾ ಕೊನೆಗೆ ಸಮುದ್ರದಲ್ಲಿ ಲೀನವಾಗುತ್ತದೆ. ಇದು ಪ್ರಕೃತಿಯೇ ನಿರ್ಮಿಸಿಕೊಂಡಿರುವ ವ್ಯವಸ್ಥೆ. ಒಂದು ಕಡೆ ಬಿದ್ದ ಮಳೆ ನೀರು ಹಳ್ಳಕೊಳ್ಳಗಳ ಮೂಲಕ ಒಂದು ನದಿಗೆ ಸೇರಿ ಅಲ್ಲಿಂದ ಒಂದು ಸಮುದ್ರಕ್ಕೆ ಸೇರುವುದು ಸಾಮಾನ್ಯ. ಆದರೆ ಹಾಸನ ಜಿಲ್ಲೆಯ ಪರ್ವತ ಶ್ರೇಣಿಯಲ್ಲಿ ಬೀಳುವ ಮಳೆ ನೀರು ಎರಡು ವಿರುದ್ಧ ದಿಕ್ಕುಗಳಲ್ಲಿ ಸಾಗಿ ಎರಡು ಸಮುದ್ರಗಳನ್ನು ಸೇರುತ್ತದೆ. ಇದು ವಿಚಿತ್ರ ಆದರೂ ಸತ್ಯ.


ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ವನಗೂರು ಬಳಿ ಬರುವ ಬಿಸಿಲೆ ವ್ಯೂ ಪಾಯಿಂಟ್ ಎಲ್ಲರಿಗೂ ಗೊತ್ತೇ ಇದೆ. ಇದರ ಸಮೀಪವೇ ಇರೋದು ಮಂಕನಹಳ್ಳಿ ಎಂಬ ಗ್ರಾಮ. ಇಲ್ಲಿ ರಿಡ್ಜ್‌ ಪಾಯಿಂಟ್‌ ಒಂದನ್ನು ಬ್ರಿಟೀಷರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಆ ಕಲ್ಲಿನ ಒಂದು ಭಾಗದಲ್ಲಿ ಅರೇಬಿಯನ್‌ ಸೀ ಎಂದು ಬರೆಯಲಾಗಿದೆ. ಇನ್ನೊಂದು ದಿಕ್ಕಿನಲ್ಲಿ ಬೇ ಆಫ್‌ ಬೆಂಗಾಲ್‌ ಎಂದು ಇಂಗ್ಲೀಷ್‌ ಅಕ್ಷರಗಳಲ್ಲಿ ಬರೆದಿದೆ.
ಇಲ್ಲಿನ ಪಶ್ಚಿಮ ಘಟ್ಟಗಳಲ್ಲಿ ಬೀಳುವ ಮಳೆ ನೀರಿನಿಂದಾಗಿ ಹಲವು ಹೊಳೆಗಳು ಹುಟ್ಟುತ್ತವೆ. ಅವು ನಮ್ಮ ರಾಜ್ಯದಲ್ಲಿಯೇ ಎರಡು ನದಿಗಳೊಂದಿಗೆ ಸೇರುತ್ತವೆ. ಆ ಎರಡೂ ನದಿಗಳೂ ವಿರುದ್ಧ ದಿಕ್ಕಿನಲ್ಲಿ ಸಾಗಿ ಎರಡು ಸಮುದ್ರ ಸೇರುತ್ತವೆ.


ಅರಬ್ಬಿ ಸಮುದ್ರ ಸೇರುವ ನೇತ್ರಾವತಿ ನದಿ
ಬೆಟ್ಟ ಕುಮರಿ ಪ್ರದೇಶದಲ್ಲಿ ಹುಟ್ಟುವ ಅಡ್ಡಹೊಳೆ ಹಾಗೂ ಪುಷ್ಪಗಿರಿಯಲ್ಲಿ ಹುಟ್ಟುವ ಗಿರಿಹೊಳೆ ಮುಂದೆ ಕುಮಾರಧಾರಾ ನದಿಯಾಗಿ ಮಾರ್ಪಡುತ್ತವೆ. ಅದು ಕುಕ್ಕೆ ಸುಬ್ರಹ್ಮಣ್ಯದ ಮೂಲಕ ಹರಿಯುತ್ತಾ ಗುಂಡ್ಯ ನದಿ ಸೇರುತ್ತದೆ. ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ಬಳಿ ಈ ಗುಂಡ್ಯ ನದಿ ನೇತ್ರಾವತಿ ನದಿಯಲ್ಲಿ ಮಿಲನವಾಗುತ್ತದೆ. ಅದು ಮಂಗಳೂರಿನ ಬಳಿ ಅರಬ್ಬಿ ಸಮುದ್ರ ಸೇರುತ್ತದೆ.

ಬಂಗಾಳ ಕೊಲ್ಲಿ ಸೇರುವ ಕಾವೇರಿ

ಇನ್ನು ಪಶ್ಚಿ ಘಟ್ಟಗಳು ಪೂರ್ವ ಭಾಗದಲ್ಲಿ ಬೀಳುವ ಮಳೆ ನೀರು ಸಣ್ಣ ತೊರೆಗಳಾಗಿ ಹರಿಯುತ್ತದೆ. ಅದು ಹೇಮಾವತಿ ನದಿಯನ್ನು ಸಂಗಮಿಸುತ್ತದೆ. ಅದು ಕೆ.ಆರ್‌.ಪೇಟೆ ಬಳಿಯ ಸಂಗಾಪುರದ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ಸೇರುತ್ತದೆ. ಮುಂದೆ ಅದು ತಮಿಳುನಾಡು ಸೇರುತ್ತದೆ. ಅಲ್ಲಿಂದ ಬಂಗಾಳ ಕೊಲ್ಲಿ ಸಮುದ್ರಕ್ಕೆ ಆ ನೀರು ಸೇರುತ್ತದೆ.
ಬಿಸಿಲೆ ಘಾಟ್‌ ವ್ಯೂವ್ ಪಾಯಿಂಟ್​ ನಿಂದ ೬ ಕಿಲೋ ಮೀಟರ್‌ ಅಂತರದಲ್ಲಿ ಈ ರಿಡ್ಜ್‌ ಕಲ್ಲು ಸಿಗುತ್ತದೆ. ಸೋಮವಾರ ಪೇಟೆಯಿಂದ ಬಿಸಿಲೆ ಘಾಟ್‌ ಗೆ ಹೋಗುವ ದಾರಿಯಲ್ಲಿ ಈ ರಿಡ್ಜ್‌ ಪಾಯಿಂಟ್‌ ಸಿಗುತ್ತದೆ.

Leave a Reply

Your email address will not be published. Required fields are marked *