May 31, 2020

ಗಂಟೆಗೆ ನೀವು ಎಷ್ಟು ಹಣ ದುಡಿಯುತ್ತೀರಿ..?

Share This

ನೀವು ಎಷ್ಟು ದುಡಿಯುತ್ತೀರಿ..? ಹೀಗಂತ ಕೇಳಿದರೆ ಏನು ಹೇಳುತ್ತೀರಿ..?  ಉದ್ಯೋಗಸ್ಥರಾದರೆ ತಿಂಗಳಿಗೆ ಇಷ್ಟು ಬರುತ್ತೆ ಎಂದು ಹೇಳುತ್ತೀರಿ. ವ್ಯಾಪಾರಸ್ಥರಾದರೂ ತಿಂಗಳ ಲೆಕ್ಕದಲ್ಲೇ ಹೇಳುತ್ತಾರೆ. ಕೆಲವರು ದಿನದ ಲೆಕ್ಕ ಹೇಳುತ್ತಾರೆ. ಗಂಟೆ ಲೆಕ್ಕ ಅವರಿಗೆ ಗೊತ್ತೇ ಇರುವುದಿಲ್ಲ.  ಇನ್ನು ಸಂಬಳ ಕೊಡುವ ಕಂಪನಿಗಳು ತಿಂಗಳ ಲೆಕ್ಕದಲ್ಲಿ ಸಂಬಳ ಕೊಟ್ಟರೂ ಆಫರ್‌ ಕೊಡುವುದು ಮಾತ್ರ ವರ್ಷದ ಲೆಕ್ಕದಲ್ಲಿ. ಇದು ನಿಮ್ಮನ್ನು ಅದೇ ಲೆಕ್ಕಾಚಾರದಲ್ಲಿ ಇಡುವ ಉದ್ದೇಶವೂ ಹೌದು.

ಹೀಗೆ ತಿಂಗಳು, ದಿನ, ವರ್ಷದ ಲೆಕ್ಕದಲ್ಲಿ ದುಡಿಯುವವರು ಮಧ್ಯಮ ವರ್ಗದವರೇ ಆಗಿರುತ್ತಾರೆ. ಅವರು ಮಧ್ಯಮ ವರ್ಗದಲ್ಲೇ ಬದುಕುತ್ತಾರೆ. ಮಧ್ಯಮ ವರ್ಗದಲ್ಲೇ ಸಾಯುತ್ತಾರೆ. ಅದೃಷ್ಟ ಕೈಕೊಟ್ಟರೆ ಬೀದಿಗೂ ಬೀಳುತ್ತಾರೆ. ಅದೇ ಗಂಟೆ ಲೆಕ್ಕದಲ್ಲಿ ದುಡಿಮೆ ಲೆಕ್ಕ ಹಾಕುವವರು ಶ್ರೀಮಂತರಾಗುತ್ತಾರೆ, ಬುದ್ಧಿವಂತರಾಗುತ್ತಾರೆ, ಐಶಾರಾಮಿ ಜೀವನ ನಡೆಸುತ್ತಾರೆ.

ಒಬ್ಬ ಚಿತ್ರನಟ ಚಿತ್ರವೊಂದಕ್ಕೆ ಡೇಟ್ಸ್‌ ಕೊಡುತ್ತಾನೆ. ಅದಕ್ಕೆ ಇಷ್ಟು ಅಂತ ಸಂಭಾವನೆ ಪಡೆಯುತ್ತಾನೆ. ಅದರಿಂದಾಲೇ ಆತ ಐಶಾರಾಮಿ ಜೀವನ ನಡೆಸಬಹುದು. ಆದರೆ ಆತ ಹಾಗೆ ಮಾಡುವುದಿಲ್ಲ. ಕಂಪನಿಗಳಿಗೆ ಬ್ರಾಂಡ್‌ ಅಂಬಾಸಿಡರ್‌ ಆಗುತ್ತಾನೆ. ಜಾಹೀರಾತುಗಳಲ್ಲಿ ನಟಿಸುತ್ತಾರೆ. ಕಾರ್ಯಕ್ರಮಗಳಿಗೆ ಅಲ್ಲಿಂದಲೂ ಹಣ ಪಡೆಯುತ್ತಾರೆ. ಹೀಗೆ ಹಲವು ಮೂಲಗಳಿಂದ ಕೋಟಿ ಕೋಟಿ ಹಣ ಸಂಪಾದಿಸಿ ಶ್ರೀಮಂತನಾಗುತ್ತಾನೆ. ಇಲ್ಲಿ ಚಲನಚಿತ್ರದ ಚಿತ್ರೀಕರಣಕ್ಕೆ ದಿನಗಳ ಲೆಕ್ಕದಲ್ಲೇ ಡೇಟ್ಸ್‌ ಕೊಡಬಹುದು. ಆದರೆ ಯಾವುದಾದರೂ ಕಾರ್ಯಕ್ರಮಕ್ಕೋ, ಜಾಹೀರಾತು ಚಿತ್ರೀಕರಣಕ್ಕೋ ಆದರೆ ಗಂಟೆ ಲೆಕ್ಕದಲ್ಲಿ ಹಣ ಪಡೆಯುತ್ತಾರೆ. ಅವರ ಆದಾಯವನ್ನು ಗಂಟೆ ಲೆಕ್ಕದಲ್ಲೇ ಲೆಕ್ಕ ಹಾಕುತ್ತಿರುತ್ತಾರೆ.

ಒಬ್ಬ ಉತ್ತಮ ಉಪಾಧ್ಯಾಯ ಶಾಲೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ದುಡಿದರೆ ತಿಂಗಳ ಕೊನೆಯಲ್ಲಿ ಸಂಬಳ ಬರುತ್ತದೆ. ಅಷ್ಟಕ್ಕೇ ತೃಪ್ತಿಪಟ್ಟುಕೊಂಡರೆ ಆತನ ಜೀವನಶೈಲಿ ಅಷ್ಟರಲ್ಲೇ ಇರುತ್ತದೆ. ಆತನ ಜ್ಞಾನವನ್ನು ಇನ್ನಷ್ಟು ಉಪಯೋಗಿಸಿದರೆ ಆತ ಪುಸ್ತಕಗಳನ್ನು ಬರೆಯಬಹುದು, ಟ್ಯೂಷನ್‌ ಮಾಡಬಹುದು, ಉಪನ್ಯಾಸಗಳನ್ನು ನೀಡಬಹುದು, ಪ್ರತ್ಯೇಕವಾಗಿ ಸ್ವಂತ ಶಾಲೆ ಆರಂಭಿಸಬಹುದು, ಅತಿಥಿ ಶಿಕ್ಷಕಾಗಿ ಹೋಗಬಹುದು. ಹೀಗೆ ತನ್ನ ಸಾಮರ್ಥ್ಯವನ್ನು ಗಂಟೆಗಳ ಲೆಕ್ಕದಲ್ಲಿ ವಿಂಗಡಿಸಿಕೊಂಡು ಕೆಲಸ ಮಾಡಿದರೆ ದುಡಿಮೆ ಕೂಡಾ ಗಂಟೆಗಳ ಲೆಕ್ಕದಲ್ಲಿ ಆಗುತ್ತದೆ.

ಒಬ್ಬ ರೈತ ಬರೀ ತೋಟಗಾರಿಕೆ ಮಾಡುತ್ತಿದ್ದರೆ, ವರ್ಷದಲ್ಲಿ ಒಮ್ಮೆ ಮಾತ್ರ ದುಡ್ಡು ಎಣಿಸಿಕೊಳ್ಳುತ್ತಾನೆ. ವಾಣಿಜ್ಯ ಬೆಳೆಗಳನ್ನು ಬೆಳೆಸಿದರೆ ಮೂರು ತಿಂಗಳಿಗೋ, ನಾಲ್ಕು ತಿಂಗಳಿಗೋ ಒಮ್ಮೆ ಹಣ ಸಂಪಾದಿಸುತ್ತಾನೆ. ಅದೇ ರೈತ ಕೊಂಚ ಜಾಗದಲ್ಲಿ ತರಕಾರಿ, ಸೊಪ್ಪು ಹಾಕಿದರೆ ಅದರಿಂದ ದಿನವೂ ಲಾಭ ಬರುತ್ತದೆ. ಹಸುಗಳನ್ನು ಇಟ್ಟುಕೊಂಡು ಹಾಲು ಡೈರಿಗೆ ಹಾಕಿದರೆ ವಾರಕ್ಕೋ, ಹದಿನೈದು ದಿನಕ್ಕೋ ಒಮ್ಮೆ ಹಣ ಬರುತ್ತದೆ. ರೇಷ್ಮೆ ಬೆಳೆದರೆ ತಿಂಗಳಿಗೊಮ್ಮೆ ಆದಾಯ ಬರುತ್ತದೆ. ಹಣ್ಣುಗಳಿಂದ ವರ್ಷಕ್ಕೊಮ್ಮೆ ಆದಾಯ ಬರುತ್ತದೆ. ಇದರಿಂದಾಗಿ ಯಾವಾಗಲೂ ಹಣ ನೋಡುವಂತಾಗುತ್ತದೆ.

ತಿಂಗಳ ಸಂಬಳ ಎಷ್ಟೇ ಬಂದರೂ ಖುಷಿ ಮಾತ್ರ ಕೆಲ ದಿನ ಮಾತ್ರ ಇರುತ್ತದೆ. ಯಾಕೆಂದರೆ, ಕೆಲವೇ ದಿನಗಳಲ್ಲಿ ಅದನ್ನು ಖಾಲಿಯಾಗಿರುತ್ತದೆ. ಅದೇ ಹಣವನ್ನು ಗಂಟೆಗಳ ಲೆಕ್ಕದಲ್ಲಿ ವಿಂಗಡಿಸಿಕೊಂಡರೂ ಖುಷಿ ಬೇರೆಯದೇ ರೀತಿಯಲ್ಲಿರುತ್ತದೆ. ಎಷ್ಟೇ ಬಂದರೂ ಯಾವಾಗಲೂ ಕೈಗೆ ಹಣ ಬರುತ್ತಿದ್ದರೆ ನಮ್ಮಲ್ಲಿ ಖುಷಿ ತಾನೇ ಬರುತ್ತದೆ. ಇದು ಶ್ರೀಮಂತರಾಗುವ ಲಕ್ಷನ ಕೂಡಾ ಹೌದು. ಹೀಗಾಗಿ, ತಿಂಗಳು, ವರ್ಷದ ಲೆಕ್ಕದಲ್ಲಿ ಯೋಚನೆ ಮಾಡಬೇಡಿ. ಗಂಟೆಗಳ ಲೆಕ್ಕದಲ್ಲಿ ಯೋಚನೆ ಮಾಡಿ. ಅದಕ್ಕೆ ತಕ್ಕಂತೆ ನಿಮ್ಮ ಸಾಮರ್ಥ್ಯವನ್ನೂ ವಿಂಗಡಿಸಿಕೊಳ್ಳಿ.

 

 

 

Leave a Reply

Your email address will not be published. Required fields are marked *