ಇದು ಹೆಂಡತಿ-ಮಕ್ಕಳ ಜೊತೆ ವಾಸಿಸಬಹುದಾದ ಜೈಲು..!

Share This

ಬಿಳಿ ಬಟ್ಟೆ.. ಅದಕ್ಕೊಂದು ನಂಬರ್‌.. ಕಂಬಿ ಹಿಂದೆ ಕೂರಬೇಕು.. ಕೆಲಸ ಮಾಡಬೇಕು.. ಜೈಲು ಅಂದ್ರೇನೇ ಶಿಕ್ಷೆ.. ಆದರೆ ಈ ಮಧ್ಯಪ್ರದೇಶದ ಇಂದೋರ್‌ ನಲ್ಲಿ ಒಂದು ಜೈಲಿದೆ.. ಅದು ಶಿಕ್ಷೆ ಅಲ್ಲವೇ ಅಲ್ಲ.. ಅದು ಜೀವನ.. ಕೈದಿಗಳು ತಮ್ಮ ಕುಟುಂಬದ ಜೊತೆಗೇ ಜೀವನ ಮಾಡಬಹುದು. ಪ್ರತಿಯೊಬ್ಬರಿಗೂ ಒಂದು ಮನೆ ಕೂಡಾ ಇರುತ್ತೆ..! ನಂಬೋಕೆ ಕಷ್ಟ ಆದರೂ ಇದು ನಿಜ..!

ಈ ಜೈಲಿನ ಹೆಸರು ಅಹಲ್ಯಾ ಬಾಯಿ ಓಪನ್‌ ಜೈಲು.. ಇಲ್ಲಿ ಕೈದಿಗಳಿಗಾಗಿ ಪ್ರತ್ಯೇಕ ಮನೆಗಳನ್ನೇ ನಿರ್ಮಿಸಲಾಗಿದೆ. ಇಲ್ಲಿ ಬರುವ ಕೈದಿಗಳು ಹೆಂಡತಿ-ಮಕ್ಕಳನ್ನು ಕೂಡಾ ಕರೆಸಿಕೊಳ್ಳಬಹುದು. ಒಟ್ಟಿಗೆ ಜೀವನ ನಡೆಸಬಹುದು..! ಹೀಗಾಗಿ ಇಲ್ಲಿನ ಕೈದಿಗಳಿಗೆ ತಾವು ಜೈಲಿನಲ್ಲಿದ್ದೇವೆ ಎಂಬ ಭಾವನೆ ಬರುವುದಿಲ್ಲ.

ಹೊರಗೆ ಹೋಗಬಹುದು..! ಕೆಲಸ ಮಾಡಬಹುದು..!

ಹೌದು, ಈ ಜೈಲಿಗೆ ಗೇಟ್‌ ಇಲ್ಲವೇ ಇಲ್ಲ. ಇನ್ನು ಕೈದಿಗಳು ಕಂಬಿ ಹಿಂದೆ ಇರದೇ ಜೈಲಿನ ನಿಯಮಗಳನ್ನು ಪಾಲಿಸಿಕೊಂಡು ಹೊರಗೆ ಓಡಾಡಿ ಕೂಡಾ ಬರಬಹುದು. ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬೇಕಾದರೆ ಕೈದಿಗಳು ಹೊರಗೆ ಹೋಗಿ ಬರಬಹುದು. ಹೊರಗೆ ದುಡಿಯಲು ಹೋಗುವುದಕ್ಕೆ ಈ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಸಂಜೆ 6 ರೊಳಗೆ ಬಂದು ಜೈಲಿನ ತರಾ ಇರುವ ಮನೆಯನ್ನು ಸೇರಿಕೊಳ್ಳಬಹುದು.

ಒಳ್ಳೆಯ ನಡತೆಯವರಿಗೆ ಮಾತ್ರ ಅವಕಾಶ..!

ಭಾರತದಲ್ಲಿ ಹಲವು ಕಡೆ ಓಪನ್‌ ಜೈಲುಗಳಿವೆ.. ಆದರೆ ಇಲ್ಲಿನ ರೀತಿಯ ವ್ಯವಸ್ಥೆಗಳಿಲ್ಲ. ಹಾಗಂತ ಎಲ್ಲರನ್ನೂ ಈ ಜೈಲಿನಲ್ಲಿಡೋದಿಲ್ಲ. ಒಳ್ಳೆಯ ನಡತೆ ಹೊಂದಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಬಿಡುಗಡೆಯಾಗುತ್ತಾರೆ ಎನ್ನುವವರನ್ನು ಮಾತ್ರ ಈ ಜೈಲಿನಲ್ಲಿಡಲಾಗುತ್ತದೆ. ಜೈಲಿನಲ್ಲಿದ್ದಾಗಲೇ ಬದುಕು ರೂಪಿಸಿಕೊಳ್ಳುವುದಕ್ಕಾಗಿ ಹೊರಗೆ ಕೆಲಸಕ್ಕೆ ಹೋಗಲು ಅವಕಾಶ ನೀಡಲಾಗುತ್ತದೆ. ಜೊತೆಗೆ ಕುಟುಂಬದವರನ್ನೂ ಕರೆಸಿಕೊಳ್ಳಲು ಅವಕಾಶ ನೀಡಲಾಗುತ್ತದೆ.

ಇಲ್ಲಿ ಮನೆಗಳ ರೂಪದಲ್ಲೇ ಕೊಠಡಿಗಳನ್ನು ನಿರ್ಮಿಸಲಾಗಿದೆ. ಸುಮಾರು 15 ಮನೆಗಳು ಇಲ್ಲಿವೆ. ಬಿಡುಗಡೆಗೆ ಹತ್ತಿರದಲ್ಲಿದ್ದವರು, ಉತ್ತಮ ನಡೆತೆಯುಳ್ಳವರು ಮಾತ್ರ ಇಲ್ಲಿಗೆ ಬರುತ್ತಾರೆ. ಇಲ್ಲಿ ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಳ್ಳಲು ಮೂವರು ಗಾರ್ಡ್‌ ಗಳನ್ನು ನೇಮಿಸಲಾಗಿದೆ. ಗೊತ್ತೋ, ಗೊತ್ತಿಲ್ಲದೆಯೋ ತಪ್ಪು ಮಾಡಿದವರು ಶಿಕ್ಷೆಯ ಕೊನೆಯ ಹಂತದಲ್ಲಿ ಉತ್ತಮ ನಾಗರಿಕನಾಗಿ ರೂಪುಗೊಳ್ಳುವುದಕ್ಕಾಗಿ ಈ ಓಪನ್‌ ಜೈಲ್‌ ವ್ಯವಸ್ಥೆ ಮಾಡಲಾಗಿದೆ.

Leave a Reply

Your email address will not be published. Required fields are marked *